ದಾವಣಗೆರೆ: ಮೆಕ್ಕೆಜೋಳ ಖರೀದಿಸಿ ರೈತ ಹಾಗೂ ವರ್ತಕರಿಗೆ ವಂಚಿಸಿದ್ದ ಬ್ಯಾಂಕ್ ಉದ್ಯೋಗಿ ಸೇರಿ ಆರು ಜನರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದು, 2.68 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, 'ಆರೋಪಿಗಳು 96 ರೈತರು ಹಾಗೂ 29 ವರ್ತಕರಿಗೆ ಒಟ್ಟು 2.68 ಕೋಟಿ ರೂ. ವಂಚಿಸಿದ್ದರು. ಈ ಸಂಬಂಧ ಒಟ್ಟು ಐದು ಪ್ರಕರಣಗಳು ದಾಖಲಾಗಿದ್ದವು. ಆರು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. ಪ್ರಕರಣಗಳ ತನಿಖೆಗೆ ಡಿಸಿಆರ್‌ಬಿ ಘಟಕದ ಡಿವೈಎಸ್‌ಪಿ ಬಿ.ಎಸ್. ನೇತೃತ್ವದಲ್ಲಿ 13 ಜನರ ತಂಡ ರಚಿಸಲಾಗಿತ್ತು. 96 ರೈತರಿಗೆ ವಂಚಿಸಿದ್ದ 1.51 ಕೋಟಿ ರೂ. ಹಾಗೂ 29 ವರ್ತಕರಿಗೆ ವಂಚಿಸಿದ್ದ 1.17 ರೂ. ಕೋಟಿ ಸೇರಿ ಒಟ್ಟು 2.68 ಕೋಟಿ ರೂ. ನಗದನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ವಶಪಡಿಸಿಕೊಂಡಿರುವ ಹಣವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಕೋರಲಾಗುವುದು ಎಂದು ತಿಳಿಸಿದರು.
ಆರೋಪಿಗಳಾದ ಗಡಿಗುಡಾಳು ಗ್ರಾಮದ ಶಿವಲಿಂಗಯ್ಯ(38), ದಾವಣಗೆರೆ ತಾಲ್ಲೂಕಿನ ನರಗನಹಳ್ಳಿಯ ಚೇತನ್(24), ದಾವಣಗೆರೆಯ ಸರಸ್ವತಿ ನಗರದ ಮಹೇಶ್ವರಯ್ಯ (35), ಹರಿಹರ ತಾಲ್ಲೂಕಿನ ಸಾಲಕಟ್ಟೆಯ ವಾಗೀಶ್ (49), ಅದೇ ಗ್ರಾಮದ ಚಂದ್ರು(40) ಹಾಗೂ ದಾವಣಗೆರೆಯ ಪಿ.ಬಿ. ರಸ್ತೆಯ ನಿವಾಸಿಯಾದ ಕೆನರಾ ಬ್ಯಾಂಕ್ ನೌಕರ ಶಿವಕುಮಾರ್(59) ಅವರು ಸದ್ಯ ಜಾಮೀನು ಪಡೆದುಕೊಂಡಿದ್ದಾರೆ.
PublicNext
27/10/2021 04:49 pm