ಬಾಗಲಕೋಟೆ :ಬದಾಮಿ ಪಟ್ಟಣ ಸೇರಿದಂತೆ ಸುತ್ತಲಿನ ಊರುಗಳಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳ ದಂಪತಿಯನ್ನು ಬಾದಾಮಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಈ ಖದೀಮ ಜೋಡಿ ಧಾರವಾಡ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಒಟ್ಟು 46 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬದಾಮಿ ಪಟ್ಟಣಕ್ಕೆ ಇತ್ತೀಚೆಗಷ್ಟೇ ಬಂದು ಕಳ್ಳತನ ಮಾಡಲು ಸ್ಕೆಚ್ ಹಾಕಿದ್ದ ಸತಿ-ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 10 ಲಕ್ಷ 50 ಸಾವಿರ ರೂ. ಮೌಲ್ಯದ ಬಂಗಾರ, 250ಗ್ರಾಂ ಬೆಳ್ಳಿ ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಸುರೇಶ್ ಶಿವಪೂರೆ, ಪತ್ನಿ ಬಸಮ್ಮ ಶಿವಪೂರೆ ಎಂಬುವವರೇ ಬಂಧಿತರು.
ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ, ಗದ್ದನಕೇರಿ, ಬಾದಾಮಿಯಲ್ಲಿ ನಡೆದ 6 ಮನೆ ಕಳ್ಳತನದ ರೂವಾರಿಗಳು ಇವರೇ ಎನ್ನಲಾಗಿದೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಕಂಬಿ ಹಿಂದೆ ತಳ್ಳಲಾಗಿದೆ.
PublicNext
26/10/2021 05:17 pm