ತಿರುವನಂತಪುರಂ: 21 ವರ್ಷದ ಯುವತಿ ಮೇಲೆ 15 ವರ್ಷದ ಬಾಲಕ ಅತ್ಯಾಚಾರಕ್ಕೆ ಯತ್ನಿಸಿದ ಆಘಾತಕಾರಿ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಿನ್ನೆ (ಸೋಮವಾರ) ನಡೆದಿದ್ದು, ಬಾಲಕನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಮಲಪ್ಪುರಂ ಜಿಲ್ಲೆಯ ಕೊಂಡೊಟ್ಟಿಯ ಕೊಟ್ಟುಕರ ಎಂಬ ಪ್ರದೇಶದ ನಿವಾಸಿ ಯುವತಿಯನ್ನು ಅದೇ ಊರಿನ ಬಾಲಕ ನಿನ್ನೆ ಮಧ್ಯಾಹ್ನ ಹಿಂಬಾಲಿಸಿದ್ದಾನೆ. ಬಳಿಕ ಯಾರು ಇಲ್ಲದೆ ಇದ್ದಾಗ ಆಕೆಯನ್ನು ಏಕಾಏಕಿ ರಸ್ತೆ ಬದಿಗೆ ಎಳೆದೊಯ್ದು ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ಕಿರುಚಾಡುತ್ತಾ, ಸಹಾಯ ಕೋರಿದ್ದಾಳೆ. ಅತ್ಯಾಚಾರ ಯತ್ನ ವಿಫಲವಾಗಿದ್ದಕ್ಕೆ ಬಾಲಕನು ಯುವತಿ ಮುಖಕ್ಕೆ ಕಲ್ಲಿನಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾನೆ. ಹಲ್ಲೆಗೊಳಗಾದ ಯುವತಿ ಕಿರುಚಾಡುತ್ತಾ, ಸಹಾಯ ಕೋರಿ ಸಮೀಪದ ಮನೆಯೊಂದಕ್ಕೆ ಓಡಿದ್ದಾಳೆ.
ಸ್ಥಳೀಯರು ಯುವತಿಯ ಸಹಾಯಕ್ಕೆ ಬರುತ್ತಿದ್ದಂತೆ ಬಾಲಕ ಅಲ್ಲಿಂದ ಪರಾರಿಯಾಗಿದ್ದ. ಬಾಲಕ ಕೃತ್ಯ ಎಸಗಿದ ಜಾಗದಲ್ಲಿ ಬಿಟ್ಟಿದ್ದ ಚಪ್ಪಲಿ ವಶಪಡಿಸಿಕೊಂಡಿದ್ದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಆರೋಪಿಯನ್ನು ಹಿಡಿದಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
PublicNext
26/10/2021 04:32 pm