ಮುಂಬೈ: ತನ್ನ ಮೊಬೈಲ್ ಕೊಡಲಿಲ್ಲವೆಂದು ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ಜಗಳವಾಡಿ ಚಾಕುವಿನಿಂದ ತುಟಿಯನ್ನು ಗಾಯಗೊಳಿಸಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಮಸಲ್‌ನಲ್ಲಿ ವರದಿಯಾಗಿದೆ.
ಖೇಮರಾಜ್ ಬಾಬುರಾವ್ ಮುಲ್ (40) ತನ್ನ ಪತ್ನಿಯಿಂದ ಹಲ್ಲೆಗೊಳಗಾದ ಪತಿ. ಗಂಡನ ಮೊಬೈಲ್ ಹಾಳಾಗಿದ್ದು, ಈ ವೇಳೆ ತನ್ನ ಮಡದಿಯ ಮೊಬೈಲ್ ಅನ್ನು ಆತ ಉಪಯೋಗಿಸುತ್ತಿದ್ದನಂತೆ. ಆದರೆ ಎರಡು ದಿನಗಳ ಬಳಿಕ ಹೆಂಡತಿ ತನ್ನ ಮೊಬೈಲ್ ವಾಪಸ್ ಕೇಳಿದಾಗ ಪತಿ ಮೊಬೈಲ್ ನೀಡಲು ನಿರಾಕರಿಸಿದ್ದನಂತೆ. ಇದೇ ವಿಚಾರವಾಗಿ ಕೆಲ ಹೊತ್ತಿನ ಬಳಿಕ ಜಗಳ ತೀವ್ರಗೊಂಡಿದ್ದು, ಆತನ ಪತ್ನಿ ಕೋಪಗೊಂಡು ಗಂಡನ ಮೇಲೆ ಪಕ್ಕದಲ್ಲಿದ್ದ ಚಾಕುವನ್ನು ಎಸೆದು ಹಲ್ಲೆ ನಡೆಸಿದ್ದಾಳೆ.
ಚಾಕು ಖೇಮರಾಜ್ ಮುಖದ ಮೇಲೆ ಬಿದ್ದು, ಆತನ ತುಟಿಗಳಿಗೆ ಗಂಭೀರವಾದ ಗಾಯವಾಗಿದೆ ಎಂದು ವರದಿಯಾಗಿದೆ. ಸದ್ಯ ಜಗಳದಲ್ಲಿ ತೀವ್ರ ಗಾಯಗೊಂಡಿರುವ ಪತಿಗೆ ಲಖಂದೂರಿನ ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪತ್ನಿ ವಿರುದ್ಧ ಕಲಂ 324 ಮತ್ತು 504ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
PublicNext
17/10/2021 09:38 pm