ಮಡಿಕೇರಿ: ಪೊನ್ನಂಪೇಟೆ ತಾಲ್ಲೂಕಿನ ಕಿರಗೂರಿನಲ್ಲಿ ಅಡಿಕೆ ಬೆಳೆ ವಿಚಾರಕ್ಕೆ ನಡೆದ ಜಗಳವು ಜೋಡಿ ಕೊಲೆ ಮತ್ತು ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ.
ಪೊನ್ನಂಪೇಟೆ ತಾಲೂಕಿನ ಕಿರಗೂರು ಗ್ರಾಮದ ಅಲೆಮಾಡ ಕುಟುಂಬದ ಸೋಮಯ್ಯ ಸಾಗರ್(52) ಗುಂಡು ಹೊಡೆದು ಮಧು(42) ಹಾಗೂ ಯಶೋಧ (50) ಎಂಬುವವರನ್ನು ಹತ್ಯೆ ಮಾಡಿ ಬಳಿಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶುಕ್ರವಾರ ಕಿರಗೂರು ಗ್ರಾಮದಲ್ಲಿರುವ ತೋಟದ ಅಡಿಕೆ ಫಸಲಿನ ವಿಚಾರಕ್ಕೆ ಸಂಬಂಧಿಸಿದಂತೆ ಸೋಮಯ್ಯ ಸಾಗರ್ ಹಾಗೂ ಆತನ ಚಿಕ್ಕಪ್ಪನ ಮಗ ಮಧು ನಡುವೆ ಕಲಹ ಉಂಟಾಗಿತ್ತು. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದಾಗ ಸಾಗರ್ ಕೋವಿಯಿಂದ ಮಧುವಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಸಂದರ್ಭ ತಡೆಯಲು ಬಂದ ಸಾಗರ್ ಪತ್ನಿ ಯಶೋಧ ಅವರಿಗೂ ಗುಂಡೇಟು ತಗುಲಿದೆ.
ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಯಶೋಧ ತುರ್ತು ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುತ್ತಿದ್ದ ಸಂದರ್ಭ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ದುಷ್ಕೃತ್ಯವೆಸಗಿದ ಬಳಿಕ ಸಾಗರ್ ಮನೆ ಬಳಿಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್ ಹಾಗೂ ಪೊನ್ನಂಪೇಟೆ ಪೊಲೀಸ್ ಠಾಣಾ ಎಸ್‌ಐ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಕೊಂಡಿದ್ದಾರೆ.
PublicNext
15/10/2021 11:54 pm