ಚಿಕ್ಕಬಳ್ಳಾಪುರ: ಹೆತ್ತ ತಂದೆ, ತಾಯಿ ಹಾಗೂ ದೊಡ್ಡಪ್ಪ ಸೇರಿ ಮಗಳನ್ನು ಕೊಲೆ ಮಾಡಿದ್ದಾರೆ. ಪೊಲೀಸರ ತನಿಖೆ ನಂತರ ಇದು ಮರ್ಯಾದಾ ಹತ್ಯೆ ಎಂಬುದು ತಿಳಿದು ಬಂದಿದೆ.
ಗೌರಿಬಿದನೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪರ್ವಿನಾ ಬಾನು ಎಂಬಾಕೆಯೇ ಕೊಲೆಯಾದ ದುರ್ದೈವಿ. ಈಕೆಯ ತಾಯಿ ಗುಲ್ಜಾರ್, ತಂದೆ ಫಯಾಜ್ ಹಾಗೂ ದೊಡ್ಡಪ್ಪ ಪ್ಯಾರೇಜಾನ್ ಕೊಲೆ ಮಾಡಿದ ಆರೋಪಿಗಳು.
ಕೊಲೆಯಾದ ಪರ್ವಿನಾ ಬಾನುವಿಗೆ 10 ವರ್ಷಗಳ ಹಿಂದೆ ತನ್ನದೇ ಸಮುದಾಯದ ಯುವಕನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ಮೊದಲ ದಿನವೇ ಗಂಡನ ಮನೆ ತೊರೆದು ಬಂದ ಆಕೆ ಸ್ವಲ್ಪ ದಿನಗಳ ನಂತರ ಅನ್ಯ ಧರ್ಮದ ಶಿವಪ್ಪ ಎಂಬಾತನೊಂದಿಗೆ ಸಂಸಾರ ನಡೆಸಿಕೊಂಡಿದ್ದಳು. ಹೆಸರು ಬದಲಾಯಿಸಿಕೊಂಡು ಆತನೊಂದಿಗೆ ಸುಖವಾಗಿದ್ದಾಗ ಮಗು ಕೂಡ ಆಗಿತ್ತು. ಈ ನಡುವೆ ಅನಾರೋಗ್ಯ ಕಾರಣ ಶಿವಪ್ಪ ಅಕಾಲಿಕವಾಗಿ ಮರಣ ಹೊಂದಿದ್ದ. ನಂತರ ಶಿಲ್ಪಾ ಎಂದು ಹೆಸರು ಬದಲಾಯಿಸಿಕೊಂಡಿದ್ದ ಪರ್ವಿನಾ ಬಾನು, ಗಾರ್ಮೆಂಟ್ಸ್ ಕೆಲಸ ಮಾಡುತ್ತ ವಾಟದಹೊಸಳ್ಳಿಯ ವಿನಯ್ ಜೊತೆ ಸಂಬಂಧ ಬೆಳೆಸಿದ್ದಳು. ಈತ ಕೂಡ ಸ್ವಲ್ಪ ದಿನಗಳಲ್ಲಿ ಅಪಘಾತಕ್ಕೆ ಬಲಿಯಾಗಿದ್ದ. ಹೀಗಾಗಿ ಈಕೆಯ ಸಹವಾಸ ಮಾಡಿದವರೆಲ್ಲ ಸಾವು ಕಾಣುತ್ತಾರೆ ಎಂದು ಜನ ಆಡಿಕೊಳ್ಳುತ್ತಿದ್ದರು. ಇದರಿಂದ ಪರ್ವಿನಾ ಮನನೊಂದಿದ್ದಳು.
ಕೆಲ ದಿನಗಳ ಹಿಂದೆ ತನ್ನ ದೊಡ್ಡಪ್ಪ ಕೆಲಸ ಮಾಡುತ್ತಿದ್ದ ಶ್ರೀನಿವಾಸಚಾರ್ಲಹಳ್ಳಿಯ ಮಾವಿನ ತೋಟಕ್ಕೆ ಹೋಗಿದ್ದಳು. ಈ ವೇಳೆ ತನ್ನ ತಾಯಿಗೂ ತನ್ನ ದೊಡ್ಡಪ್ಪನಿಗೂ ಸಂಬಂಧ ಇರುವ ವಿಷಯ ಪರ್ವಿನಾಳಿಗೆ ತಿಳಿದು ಬಂದಿದೆ. ಈಕೆ ಬದುಕಿದ್ದರೆ ಈ ವಿಷಯ ಬಹಿರಂಗವಾಗುತ್ತದೆಂಬ ಕಾರಣಕ್ಕೆ ಪರ್ವಿನಾ ಧರಿಸಿದ್ದ ಜಾಕೆಟ್ ನ ದಾರ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಶವವನ್ನು ಬಾವಿಗೆ ಎಸೆದಿದ್ದಾರೆ. ಮೇಲೆ ಮರದ ಟೊಂಗೆಗಳನ್ನು ಕಟ್ ಮಾಡಿ ಎಸೆದಿದ್ದಾರೆ.
ಸ್ಥಳೀಯರ ಮಾಹಿತಿಯಿಂದ ಪೊಲೀಸರಿಗೆ ವಿಷಯ ಗೊತ್ತಾಗಿ ತನಿಖೆ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
PublicNext
28/09/2021 01:23 pm