ಭುವನೇಶ್ವರ್ : ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಮತ್ತು ಸಿನಿಮಾ ಕಲಾವಿದರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ಪಡೆ ದಾಳಿ ಮಾಡುವುದನ್ನು ಸಾಮಾನ್ಯ. ಆದರೆ, ಒಬ್ಬ ಅಂಗನವಾಡಿ ಕಾರ್ಯಕರ್ತೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಆಸ್ತಿಯ ಮೌಲ್ಯ ಕಂಡು ದಂಗಾಗಿದ್ದಾರೆ. ಹೌದು, ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಅಂಗನವಾಡಿ ಕಾರ್ಯಕರ್ತೆ ಆಕೆಯ ಹೆಸರಿನಲ್ಲಿದ್ದ ಸಂಪತ್ತನ್ನು ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ಈಕೆಯ ಹೆಸರು ಕಬಿತಾ ಮಥನ್. ಭುವನೇಶ್ವರದ ಕೊರಡಕಂಟ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಭ್ರಷ್ಟಾಚಾರ ಆರೋಪದ ಮೇಲೆ ಆಕೆಯನ್ನು ಒಡಿಶಾ ಭ್ರಷ್ಟಾಚಾರ ನಿಗ್ರಹ ಪಡೆ ಬಂಧಿಸಿದೆ. ಅಲ್ಲದೆ, ಆಕೆಗೆ ಸಂಬಂಧಿಸಿದ 4 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದೆ.
ನಾಲ್ಕು ಮನೆ, 14 ನಿವೇಶನ, ಒಂದು ಕಾರು, 3 ದ್ವಿಚಕ್ರ ವಾಹನ, ಸುಮಾರು 2.2 ಲಕ್ಷ ರೂ. ಜೀವವಿಮೆ, ಸುಮಾರು 6.36 ಮೌಲ್ಯದ 212 ಗ್ರಾಂ ಚಿನ್ನಾಭರಣ ಹಾಗೂ ಇತರೆ ಸ್ಥಿರ ಮತ್ತು ಚರಾಸ್ಥಿ ಸೇರಿ ಒಟ್ಟು 4 ಕೋಟಿ ರೂಪಾಯಿಗೂ ಅಧಿಕ ಆಸ್ತಿಯನ್ನು ಕಬಿತಾ ಮಥನ್ ಮತ್ತು ಆಕೆಯ ಕುಟುಂಬದವರು ಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಆಕೆಯ ಬಂಧನವಾಗಿದ್ದು, ಆದಾಯದ ಮೂಲ ಯಾವುದು? ಎಂಬಿತ್ಯಾದಿ ಬಗ್ಗೆ ತನಿಖೆ ಮುಂದುವರೆದಿದೆ.
PublicNext
16/09/2021 01:57 pm