ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಮರಿನಾಯಕನಹಳ್ಳಿ ಸಮೀಪ ಭಾನುವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಈವರೆಗೂ 8 ಜನ ಸಾವನ್ನಪ್ಪಿದ್ದಾರೆ. ಇನ್ನೂ ಎಂಟು ಮಂದಿ ಸ್ಥಿತಿ ಗಂಭೀರವಾಗಿದೆ. ಅಪಘಾತದಲ್ಲಿ ಪುಟ್ಟ ಕಂದನ ಕಣ್ಣೆದುರೇ ಅಪ್ಪ-ಅಮ್ಮ ಬಲಿಯಾಗಿದ್ದು, ಒಂದು ವರ್ಷದ ಮಗು ಅನಾಥವಾಗಿದೆ. ಕೂಲಿ ಕೆಲಸದಿಂದ ಬರುತ್ತಿದ್ದ ಕಾರ್ಮಿಕರ ಜೀವ ಕಿತ್ತ ಜವರಾಯ, ತಮ್ಮನ ಮಗನ ಮದುವೆ ಹೋಗುತ್ತಿದ್ದ ಅಜ್ಜಿಯ ಪ್ರಾಣವನ್ನೂ ಹೊತ್ತೊಯ್ದಿದ್ದಾನೆ.
ಸಿಮೆಂಟ್ ಲಾರಿ ಮತ್ತು ಜೀಪಿನ ನಡುವೆ ಸಂಭವಿಸಿದ ಈ ಅಪಘಾತದಲ್ಲಿ ಜೀಪ್ ಚಾಲಕ ರಾಯಲ್ಪಾಡು ರಮೇಶ್(49), ಸೊಣ್ಣಶೆಟ್ಟಹಳ್ಳಿಯ ನಾರಾಯಣಸ್ವಾಮಿ (60), ಗೌಪಲ್ಲಿಯ ಮುನಿರತ್ನ (50), ಆಂಧ್ರದ ಮದನಪಲ್ಲಿಯ ವೆಂಕಟಲಕ್ಷ್ಮಮ್ಮ (45), ಬೆಂಗಳೂರಿನ ಮುನಿಕೃಷ್ಣ (40), ಶ್ರೀನಿವಾಸಪುರ ತಾಲೂಕಿನ ಕುಸಂದ್ರದ ನಿಖಿಲ್ (35), ಬಳ್ಳಾರಿ ಜಿಲ್ಲೆಯ ಕೂಳಗಿಯ ಜೆಸಿಬಿ ಆಪರೇಟರ್ ರಾಜಪ್ಪ (28), ಈತನ ಪತ್ನಿ ಮೌನಿಕಾ (25) ಮೃತ ಸಾವನ್ನಪ್ಪಿದ್ದಾರೆ.
ಜೀಪ್ ಹಾಗೂ ಲಾರಿ ಭೀಕರ ಅಪಘಾತದಲ್ಲಿ ಮೃತಪಟ್ಟವರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಟಿ ಸುವರನಹಳ್ಳಿ ಮೂಲದ ರಾಜಪ್ಪ(35) ಮತ್ತು ಮೌನಿಕಾ (25) ದಂಪತಿ ಇದ್ದಾರೆ. ಅಪಘಾತ ನಡೆದಾಗ ಈ ದಂಪತಿ ಜತೆ 1 ವರ್ಷದ ಮಗು ಕೂಡ ಇತ್ತು. ಮಗು ಕಾಲಿಗೆ ಗಾಯವಾಗಿದ್ದು, ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಆಂಧ್ರ ಮೂಲದ ನಾರನ್ನಗಾರಪಲ್ಲಿಯ ವೆಂಕಟಲಕ್ಷ್ಮಮ್ಮ(59) ಅವರು ತಮ್ಮ ತಮ್ಮನ ಮಗನ ಮದುವೆಗೆಂದು ಪಕ್ಕದ ಮನೆಯ 8 ವರ್ಷದ ಬಾಲಕನನ್ನೂ ಕರೆದುಕೊಂಡು ಚಿಂತಾಮಣಿ ತಾಲೂಕಿನ ಮಿಂಡಿಗಲ್ ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು. ರಾಯಲ್ಪಾಡುವಿನಿಂದ ಇದೇ ಜೀಪ್ ಮೂಲಕ ಚಿಂತಾಮಣಿಗೆ ಬರುತ್ತಿದ್ದರು. ಅಪಘಾತದಲ್ಲಿ ಅಜ್ಜಿ ತೀರಿಕೊಂಡಿದ್ದು, ಅದೃಷ್ಟವಶಾತ್ ಬಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
PublicNext
13/09/2021 09:27 pm