ದಾವಣಗೆರೆ: ನಗರದ ಎಸ್ ಓ ಜಿ ಕಾಲೋನಿಯಲ್ಲಿ ಬಲವಂತದ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿ ಕ್ರೈಸ್ತ ಪಾದ್ರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಮನೆಯಲ್ಲೇ ಹಲವರನ್ನು ಸೇರಿಸಿ ಮತಾಂತರ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದ್ದು, ಪ್ರತಿ ಭಾನುವಾರ ವಿಶೇಷ ದಿನಗಳಲ್ಲಿ ಕ್ರೈಸ್ತ ಬೋಧನೆಗಳನ್ನು ಪಾದ್ರಿ ಮಾಡುತ್ತಿದ್ದರು ಎನ್ನಲಾಗಿದೆ.
ದಾಳಿ ನಡೆಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪಾದ್ರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರಲ್ಲದೇ, ನೀವು ಮನೆಯಲ್ಲೇ ಏಕೆ ಇಷ್ಟು ಜನರನ್ನು ಕರೆಸುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಮತಾಂತರದ ಮೂಲಕ ಮೂಢನಂಬಿಕೆ ಬಿತ್ತುವ ಪ್ರಯತ್ನ ಮಾಡುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಮತ್ತೊಮ್ಮೆ ಮನೆಗೆ ಹಿಂದೂಗಳನ್ನು ಕರೆಸಿ ಮತಾಂತರ ಮಾಡದಂತೆ ತಾಕೀತು ಮಾಡಿದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
PublicNext
13/09/2021 03:53 pm