ತಿರುವನಂತಪುರ: ವರದಕ್ಷಿಣೆ ಕಿರುಕುಳದಿಂದ ನೊಂದು ಯುವ ವೈದ್ಯೆ ವಿಸ್ಮಯ ನಾಯರ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದು, ವಿಸ್ಮಯ ನಾಯರ್ ಪತಿಯ ಕರಾಳ ಮುಖ ಬಯಲಾಗಿದೆ.
ಕಿರಣ್ ಕುಮಾರ್ (30) ನೀಚ ಕೃತ್ಯ ಎಸಗಿದ ಪತಿ. ವಿಸ್ಮಯ ನಾಯರ್ ಅವರಿಗೆ ವರದಕ್ಷಿಣೆ ತರುವಂತೆ ಕಿರಣ್ ಕುಮಾರ್ ಮಾನಸಿಕ ಕಿರುಕುಳ ನೀಡುತ್ತಿದ್ದ. ಇದರಿಂದಾಗಿ ನೊಂದ ವಿಸ್ಮಯ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾನೆಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. 500 ಪುಟಗಳ ಚಾರ್ಜ್ಶೀಟ್ ಆಗಿದ್ದು, ಅದರಲ್ಲಿ 2 ಸಾಕ್ಷಿದಾರರು, 98 ದಾಖಲೆಗಳು, 56 ದೈಹಿಕ ಸಾಕ್ಷಿಯ ತುಣುಕುಗಳು ಒಳಗೊಂಡಿವೆ ಎಂದು ಸಾಸ್ಥಕೋಟ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜ್ಕುಮಾರ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರಿಗೆ ವಿವಿಧ ವಿಭಾಗಗಳಿಂದ ಸಹಾಯ ದೊರೆತಿದೆ. ಅದರಲ್ಲೂ ಡಿಜಿಟಲ್ ಸಾಕ್ಷ್ಯವೇ ನಿರ್ಣಾಯಕವಾಗಿದೆ. ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರು ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಈ ಪ್ರಕರಣದಲ್ಲಿ ಬಲವಾದ ಪುರಾವೆಗಳನ್ನು ಹೊಂದಿದ್ದು, ಹಲವಾರು ಸ್ವತಂತ್ರ ಸಾಕ್ಷಿಗಳಿದ್ದಾರೆ. ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಡಿಜಿಟಲ್ ಪುರಾವೆಗಳು ಸೈಬರ್ ವಿಂಗ್ ತನಿಖಾ ತಂಡ ಹಿಂಪಡೆದಿದೆ. ಕೆಲವು ಸಾಕ್ಷಿಗಳು ಎರ್ನಾಕುಲಂನಲ್ಲಿದ್ದಾರೆ ಮತ್ತು ಅವರಿಗೆ (ವಿಸ್ಮಯ) ಚಾಟ್ ಸಂದೇಶಗಳನ್ನು ಕಳುಹಿಸಿದ ಪುರಾವೆಗಳಿವೆ ಎಂದು ಡಿವೈಎಸ್ಪಿ ರಾಜಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.
ಏನಿದು ಪ್ರಕರಣ?:
ಜೂನ್ 24ರಂದು ವಿಸ್ಮಯಾ ಅವರ ಮೃತದೇಹ ಮನೆಯ ಸ್ನಾನಗೃಹದಲ್ಲಿ ನೇತುಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದಕ್ಕೂ ಮುನ್ನ 24 ವರ್ಷದ ಆಯುರ್ವೇದ ವೈದ್ಯ ವಿದ್ಯಾರ್ಥಿನಿಯಾಗಿದ್ದ ವಿಸ್ಮಯ, ತನ್ನ ಗಂಡನ ಮನೆಯಲ್ಲಿ ನೀಡುತ್ತಿರುವ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಚಿತ್ರಗಳನ್ನು ಕೂಡಾ ತವರು ಮನೆಯವರೊಂದಿಗೆ ಹಂಚಿಕೊಂಡಿದ್ದರು. ಕಿರಣ್ ಕುಮಾರ್ ತನ್ನ ಕೂದಲು ಎಳೆದುಕೊಂಡು ಹೋಗಿ ಮುಖದ ಮೇಲೆ ಒದ್ದಿದ್ದಾಗಿ ವಾಟ್ಸ್ಆ್ಯಪ್ ಸಂದೇಶದಲ್ಲಿ ದೂರಿದ್ದರು.
2020ರಲ್ಲಿ ವಿವಾಹವಾದ ಬಳಿಕ ಪತಿ ಹಾಗೂ ಆತನ ಮನೆಯವರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ವಿಸ್ಮಯ ಸಾವಿನ ಬಳಿಕ ಪೋಷಕರು ದೂರು ನೀಡಿದ್ದರು.
ವಿಸ್ಮಯ ತಂದೆ ತ್ರಿವಿಕ್ರಮನ್ ನಾಯರ್, ವಿವಾಹದ ವೇಳೆ 800 ಗ್ರಾಂ ಚಿನ್ನ ಹಾಗೂ 10 ಲಕ್ಷ ರೂ. ಮೌಲ್ಯದ ಒಂದು ಎಕರೆ ಭೂಮಿಯನ್ನು ವರದಕ್ಷಿಣೆಯಾಗಿ ನೀಡಿದ್ದರು. ವಿಸ್ಮಯಾ ಸಾವು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬರ್ಬರ ವರದಕ್ಷಿಣೆ ವ್ಯವಸ್ಥೆಯನ್ನು ಖಂಡಿಸಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇಂಥ ದೂರುಗಳಿಗೆ ಸ್ಪಂದಿಸಲು ವಿಶೇಷ ಅಧಿಕಾರಿಗಳನ್ನು ನೇಮಿಸುವುದಾಗಿ ಹೇಳಿದ್ದರು.
PublicNext
12/09/2021 07:52 am