ಭೋಪಾಲ್ ; ಮಳೆಗಾಗಿ ಕತ್ತೆ ಮದುವೆ, ಕಪ್ಪೆ ಮದುವೆ ಮಾಡುವುದನ್ನಾ ನಾವು ನೀವೆಲ್ಲಾ ನೋಡಿದ್ದೇವೆ ಕೇಳಿದ್ದೇವೆ. ಆದರೆ ಮಳೆಗಾಗಿ ಪ್ರಾರ್ಥಿಸಿ ಆರು ಅಪ್ರಾಪ್ತ ಬಾಲಕಿಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶ ಬುಂದೇಲಖಂಡದ ದಾಮೋಹ್ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (NCPCR) ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಸಮಗ್ರ ವರದಿ ನೀಡುವಂತೆ ದಾಮೋಹ್ ಜಿಲ್ಲಾಡಳಿತಕ್ಕೆ ತಾಕೀತು ಮಾಡಿದೆ.
'ಇತ್ತೀಚೆಗೆ ದಾಮೋಹ್ ಜಿಲ್ಲೆಯ ಜಬೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಬನಿಯಾ ಎಂಬಲ್ಲಿ ಸಾರ್ವಜನಿಕವಾಗಿ ಆರು ಅಪ್ರಾಪ್ತ ಬಾಲಕಿಯರನ್ನು ಮೂಢನಂಬಿಕೆಯಿಂದ ಬೆತ್ತಲೆ ಮೆರವಣಿಗೆ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು ತಪ್ಪಿತಸ್ಥರನ್ನು ಶೀಘ್ರ ಬಂಧಿಸುತ್ತೇವೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿಆರ್ ತನ್ವೀರ್ ತಿಳಿಸಿದ್ದಾರೆ.
'ಘಟನೆಯಲ್ಲಿ ಬಾಲಕಿಯರನ್ನು ಬೆತ್ತಲೆಯಾಗಿಸಿ ಅವರಿಗೆ ಕಟ್ಟಿಗೆ ನೊಗ ಹೊರಿಸಿ ಹಾಗೂ ಕೊರಳಲ್ಲಿ ಕಪ್ಪೆ ಕಟ್ಟಿಸಿ ಮೆರವಣಿಗೆ ಮಾಡಲಾಗಿದೆ. ಮಳೆಗಾಗಿ ವರುಣ ದೇವರ ಪ್ರಾರ್ಥನೆ ಮಾಡಲು ಈ ರೀತಿ ಮಾಡಲಾಗಿದೆ' ಎಂದು ಎಸ್ ಪಿ ತಿಳಿಸಿದ್ದಾರೆ.
PublicNext
07/09/2021 07:19 pm