ಚೆನ್ನೈ: ಬಸ್ ನಿಲ್ದಾಣದಲ್ಲಿ ನಿಂತಿದ್ದ ಪತ್ನಿಯ ಮೇಲೆ ಪತಿಯೇ ಆ್ಯಸಿಡ್ ಎರಚಿರುವ ಘಟನೆ ಸೇಲಂ ಜಿಲ್ಲೆಯಲ್ಲಿ ನಡೆದಿದೆ.
ಯೇಸುದಾಸ್ (53) ಆ್ಯಸಿಡ್ ಎರಚಿದ ಕಿರಾತಕ. ಯೇಸುದಾಸ್ ತನ್ನ ಪತ್ನಿ ರೇವತಿ ಮೇಲೆ ಆ್ಯಸಿಡ್ ಎರಚಿದ್ದು, ಪರಿಣಾಮ ಆಕೆಯ ಮುಖ, ಕುತ್ತಿಗೆ ಸುಟ್ಟಿದೆ. ಯೇಸುದಾಸ್ ಹಾಗೂ ರೇವತಿ 20 ವರ್ಷಗಳ ಹಿಂದೆ ಮದುವೆಯಾಗಿದ್ದು, ಮೂವರು ಗಂಡು ಮಕ್ಕಳಿದ್ದಾರೆ. ಆದರೆ ದಂಪತಿ ಮಧ್ಯೆ ಆಗಾಗ್ಗೆ ಕಲಹಗಳು ಉಂಟಾಗುತ್ತಿದ್ದು, ಮಹಿಳೆ ಪತಿಯನ್ನು ತೊರೆದು ತವರುಮನೆಯಲ್ಲಿ ವಾಸಿಸುತ್ತಿದ್ದಳು. ಅಲ್ಲದೆ ತಾಯಿಯೊಂದಿಗೆ ಬಂದು ರೇವತಿ ಪತಿಯ ವಿರುದ್ಧ ಸೇಲಂ ಮಹಿಳಾ ಠಾಣೆಗೆ ದೂರು ನೀಡಿದ್ದಳು.
ಪೊಲೀಸ್ ಠಾಣೆಯಿಂದ ಬಸ್ ನಿಲ್ದಾಣಕ್ಕೆ ಬಂದು ನಿಂತಿದ್ದ ರೇವತಿ ಮೇಲೆ ಯೇಸುದಾಸ್ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ಘಟನೆಯಲ್ಲಿ ರೇವತಿ ಮುಖ, ಕುತ್ತಿಗೆ ಸುಟ್ಟಿದೆ. ಗಾಬರಿಗೊಂಡ ತಾಯಿ ಆಕೆಯನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಸೇಲಂ ಪೊಲೀಸ್ ಆಯುಕ್ತ ನಜ್ಮುಲ್ ಹೊಡಾ ಮಾಹಿತಿ ಸಂಗ್ರಹಿಸಿದ್ದು, ಆರೋಪಿ ಪತ್ತೆಗಾಗಿ ತಂಡ ರಚಿಸಿದ್ದರು. ಘಟನೆ ನಡೆದ ಕೆಲ ಹೊತ್ತಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಮಾಹಿತಿ ಸಂಗ್ರಹಿಸುತ್ತಿದ್ದಾರೆ.
PublicNext
31/08/2021 09:52 pm