ಅಮರಾವತಿ: 93 ವರ್ಷದ ಅಜ್ಜನ ಮೃತದೇಹವನ್ನು ಅಂತ್ಯಕ್ರಿಯೆ ನಡೆಸುವ ಬದಲು ಮನೆಯಲ್ಲಿದ್ದ ಫ್ರಿಡ್ಜ್ನಲ್ಲಿ ಮುಚ್ಚಿಟ್ಟಿರುವ ಘಟನೆ ಆಂಧ್ರಪ್ರದೇಶದ ವರಂಗಲ್ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ನಿವೃತ್ತ ಕಾರ್ಮಿಕ ಬಾಲಯ್ಯ ಎಂದು ಗುರುತಿಸಲಾಗಿದೆ. ಪಿಂಚಣಿ ಹಣ ಪಡೆಯುತ್ತಿದ್ದ ಅವರು ಅವರು ಮೊಮ್ಮಗ ನಿಖಿಲ್‌ನೊಂದಿಗೆ ವರಂಗಲ್ ಗ್ರಾಮೀಣ ಭಾಗದ ಪರಕಾಲ ಎಂಬಲ್ಲಿ ಜೀವನ ನಡೆಸುತ್ತಿದ್ದರು. ಆದರೆ ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ಬಾಲಯ್ಯ ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದು, ಅಜ್ಜನ ಅಂತ್ಯಕ್ರಿಯೆ ನಡೆಸಲು ಹಣವಿಲ್ಲದ ಕಾರಣ ನಿಖಿಲ್ ಮನೆಯಲ್ಲಿನ ಫ್ರಿಡ್ಜ್ನಲ್ಲಿ ಮೃತದೇಹ ಬಚ್ಚಿಟ್ಟಿದ್ದಾನೆ.
ಮೂರು ದಿನಗಳ ನಂತರ ಕೆಟ್ಟ ವಾಸನೆ ಬರಲು ಶುರುವಾಗಿದೆ. ಈ ವೇಳೆ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ವೃದ್ಧನ ಮೃತದೇಹ ಸಿಕ್ಕಿದೆ. ಈ ವೇಳೆ ನಿಖಿಲ್‌ನನ್ನು ಪ್ರಶ್ನಿಸಿದಾಗ ಅಂತ್ಯಕ್ರಿಯೆ ನಡೆಸಲು ಹಣವಿಲ್ಲದ ಕಾರಣ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ನಿಖಿಲ್ನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
PublicNext
12/08/2021 07:31 pm