ಬೆಂಗಳೂರು: ಪೊಲೀಸ್ ವಶದಲ್ಲಿದ್ದ ಆಫ್ರಿಕಾ ದೇಶದ ಪ್ರಜೆ ಸಾವು ಪ್ರಕರಣವನ್ನು ಖಂಡಿಸಿ ಬೆಂಗಳೂರಿನ ಜೆಸಿ ನಗರ ಠಾಣೆ ಮುಂಭಾಗದಲ್ಲಿ ಆಫ್ರಿಕನ್ಸ್ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲವು ಉದ್ರಿಕ್ತರ ಗುಂಪು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ, ಠಾಣೆಗೆ ಮುತ್ತಿಗೆ ಹಾಕಿ ಗುಂಡಾವರ್ತನೆ ತೋರಿದರು. ಪರಿಣಾಮ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಆಫ್ರಿಕನ್ ಪ್ರಜೆಗಳ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ.
ಡ್ರಗ್ ಕೇಸ್ ಪ್ರಕರಣ ಸಂಬಂಧ ನಿನ್ನೆ ಜೆಸಿ ನಗರ ಠಾಣೆಯ ಪೊಲೀಸರು ಆಫ್ರಿಕನ್ ಪ್ರಜೆ ಜೊಯೆಲ್ ಮಾನ್ ಎಂಬಾತನನ್ನ ಬಂಧಿಸಿದ್ದರು. ಬಂಧಿತ ಆರೋಪಿಗೆ ನಿನ್ನೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಜೊಯೆಲ್ ಮಾನ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ವಶದಲ್ಲಿದ್ದ ಜಾನ್ ಸಾವನ್ನಪ್ಪಿರುವ ಹಿನ್ನೆಲೆ ಜೆಸಿ ನಗರ ಪೊಲೀಸ್ ಠಾಣೆಗೆ ವಿದೇಶಿ ಪ್ರಜೆಗಳು ಇಂದು ಸಂಜೆ ಮುತ್ತಿಗೆ ಹಾಕಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದಾಂಧಲೆಗೆ ಯತ್ನಿಸಿದ್ದಾರೆ. ಪೊಲೀಸರು ಹಲ್ಲೆಗೈದು ಕೊಲೆ ಮಾಡಿದ್ದಾರೆ ಎಂದು ಆಫ್ರಿಕಾ ಪ್ರಜೆಗಳು ಪೊಲೀಸರ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವಾಚ್ಯವಾಗಿ ಬೈದು, ಕೆಟ್ಟದಾಗಿ ಪೊಲೀಸರನ್ನು ಗುರಿಯಾಗಿಸಿ ಸನ್ನೆ, ಬೆಂಕಿ ಕಡ್ಡಿ ಗೀರಿ ಗುಂಡಾವರ್ತನೆ ತೋರಿದ್ದಾರೆ.
PublicNext
02/08/2021 10:34 pm