ದಾವಣಗೆರೆ: ಕಳೆದ ಮೂರು ದಿನಗಳ ಹಿಂದೆ ಮಹಿಳೆಯರಿಬ್ಬರನ್ನು ಹತ್ಯೆ ಮಾಡಿರುವ ಘಟನೆ ನಗರದ ಹೊರಭಾಗದ ಆಂಜನೇಯ ಕಾಟನ್ ಮಿಲ್ ಬಡಾವಣೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗೌರಮ್ಮ ಹಾಗೂ ರಾಧಿಕಾ ಹತ್ಯೆಗೀಡಾದ ಮಹಿಳೆಯರು ಎಂದು ಗುರುತಿಸಲಾಗಿದೆ. ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬೆನಕನಹಳ್ಳಿ ಗ್ರಾಮದವರಾದ ಇವರು ದಾವಣಗೆರೆಯ ಆಂಜನೇಯ ಕಾಟನ್ ಮಿಲ್ ಬಡಾವಣೆಯ ಮನೆಯಲ್ಲಿ ಇಬ್ಬರೂ ವಾಸ ಇದ್ದರು.
ಅಂದ ಹಾಗೆ ಈ ಮಹಿಳೆಯರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದ್ರೆ ಕಳೆದ ಎರಡರಿಂದ ಮೂರು ದಿನಗಳಿಂದ ಕೆಲಸಕ್ಕೆ ಬಂದಿರಲಿಲ್ಲ. ಮನೆಯಿಂದ ಹೊರಗೂ ಕಾಣಿಸಿಕೊಂಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಮಹಿಳೆಯರ ಸಂಬಂಧಿಯಾದ ಚಂದ್ರಮ್ಮ ಹಲವು ಬಾರಿ ಕರೆ ಮಾಡಿದರೂ ಫೋನ್ ಬಂದ್ ಆಗಿತ್ತು. ಹೀಗಾಗಿ, ಕಳೆದ ದಿನ ಮನೆಗೆ ಬಂದಿದ್ದು, ಮನೆಯಿಂದ ಯಾವುದೋ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ್ದಾರೆ.
ಇದರಿಂದ ಆತಂಕಗೊಂಡ ಚಂದ್ರಮ್ಮ
ಈ ಸಂಬಂಧ ವಿದ್ಯಾನಗರ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ತೆರೆದು ನೋಡಿದಾಗ ಗೌರಮ್ಮ ಹಾಗೂ ರಾಧಿಕಾ ಕೊಲೆಯಾಗಿರುವುದು ಕಂಡುಬಂದಿದೆ. ಗೌರಮ್ಮ ಪತಿ ಮಂಜುನಾಥ್ ಎಂಬುವವರ ಮೇಲೆ ಅನುಮಾನ ವ್ಯಕ್ತಪಡಿಸಿ ಚಂದ್ರಮ್ಮ ವಿದ್ಯಾನಗರ ಠಾಣೆಗೆ ದೂರು ನೀಡಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಮಂಜುನಾಥ ಮನೆಗೆ ಬಂದು ಹೋಗಿದ್ದು, ಅಂದು ರಾತ್ರಿ ಇಬ್ಬರು ಜಗಳ ಮಾಡಿಕೊಂಡಿದ್ದರಂತೆ. ಈ ಹಿನ್ನೆಲೆಯಲ್ಲಿ ಆತನ ಮೇಲೆ ಅನುಮಾನ ವ್ಯಕ್ತವಾಗಿದ್ದು, ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
PublicNext
30/07/2021 03:51 pm