ಬೆಂಗಳೂರು: ಸರಗಳ್ಳತನದ ಆರೋಪಿಗಳನ್ನು ಅರೆಸ್ಟ್ ಮಾಡುವಾಗ ಓರ್ವ ಆರೋಪಿ ಸೈನೈಡ್ ತಿಂದು ಮೃತಪಟ್ಟಿದ್ದಾನೆ. ಹಾಗೂ ಇನ್ನೋರ್ವ ಆರೋಪಿ ಸೆರೆಯಾಗಿದ್ದಾನೆ. ಕೆ.ಆರ್. ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಸರಗಳ್ಳತನ ಪ್ರಕರಣ ನಡೆದಿದ್ದು, ಆರೋಪಿಗಳನ್ನು ಅರೆಸ್ಟ್ ಮಾಡುವುದಕ್ಕೆಂದು ಪೊಲೀಸರು ಮುಂದಾದಾಗ ಸೈನೈಡ್ ತಿಂದು ಆರೋಪಿ ಸಾವನ್ನಪ್ಪಿದ್ದಾನೆ. ಹೊಸಕೋಟೆ ಬಳಿಯ ಪಿಲ್ಲಗುಂಪಾದ ದೇವಾಲಯದ ಬಳಿ ಈ ಘಟನೆ ನಡೆದಿದೆ.
ಆಂಧ್ರದ ಮದನಪಲ್ಲಿ ಮೂಲದ ಶಂಕರ್ ಮೃತ ಆರೋಪಿ. ಶಂಕರ್ ವೈ.ಎಸ್.ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ. ಈತ ಬೆಂಗಳೂರಿನಲ್ಲಿ ಸರಗಳ್ಳತನ ಮಾಡಿದ್ದ ಎಂಬ ಆರೋಪ ಇದೆ. ಕಳ್ಳತನ ಮಾಡುವ ಮುಂಚೆ ಈ ಗ್ಯಾಂಗ್ ಸದಸ್ಯರು ದೇವಸ್ಥಾನಕ್ಕೆ ಬಂದು ಕೈ ಮುಗಿಯುತ್ತಿದ್ದರು. ಅದೇ ರೀತಿ ಇಂದು ಕೂಡ ಹೊಸಕೋಟೆ ಬಳಿಯ ಪಿಲ್ಲಗುಂಪಾದ ದೇವಾಲಯಕ್ಕೆ ಈ ಕಳ್ಳರು ಬರುತ್ತಿರುವ ಮಾಹಿತಿ ಸಿಕ್ಕಿದೆ. ಹೀಗಾಗಿ ದೇವಾಲಯದ ಬಳಿ ಪೊಲೀಸರು ಕಾದು ಆರೋಪಿಗಳನ್ನು ಅರೆಸ್ಟ್ ಮಾಡಲು ಮುಂದಾಗಿದ್ದಾರೆ.
ಈ ವೇಳೆ ಆರೋಪಿ ಶಂಕರ್ ಜೇಬಿನಲ್ಲಿದ್ದ ಸೈನೈಡ್ ಸೇವಿಸಿ ರಕ್ತಕಾರಿ ಸಾವನ್ನಪ್ಪಿದ್ದಾನೆ. ಇನ್ನೋರ್ವ ಆರೋಪಿ ಚಂದ್ರಶೇಖರ್ ಎಂಬಾತನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
PublicNext
29/07/2021 03:57 pm