ಬೆಂಗಳೂರು: ಪತ್ನಿ ಹಾಗೂ ಮಕ್ಕಳನ್ನು ಬಿಟ್ಟು ಅತ್ತೆ ಮಗಳ ಜೊತೆ ಓಡಿ ಹೋಗಲು ಎಟಿಎಂ ಹಣ ಕದ್ದು ಪರಾರಿಯಾಗಿದ್ದ ಚಾಲಕನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಮೂಲದ ಯೋಗೇಶ್ ಬಂಧಿತ ಆರೋಪಿ. ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫೆಬ್ರವರಿ 3ರಂದು ಘಟನೆ ನಡೆದಿತ್ತು. ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿಯಲ್ಲಿ ಡ್ರೈವರ್ ಆಗಿದ್ದ ಆರೋಪಿ ಯೋಗೇಶ್ ಎಟಿಎಂಗೆ ತುಂಬಿಸಬೇಕಿದ್ದ 64 ಲಕ್ಷ ರೂ. ಹಣ ಕದ್ದು ಪರಾರಿಯಾಗಿದ್ದ. ಆರೋಪಿಯ ಪತ್ತೆಗೆ ಸುಬ್ರಹ್ಮಣ್ಯ ನಗರ ಪೊಲೀಸರು ಮುಂದಾಗಿದ್ದರು. ಹಣ ಕದ್ದು ಆಶ್ರಯಕ್ಕಾಗಿ ಸ್ನೇಹಿತರನ್ನು ಸಂಪರ್ಕಿಸಿದ್ದ ಆರೋಪಿ ಯೋಗೇಶ್ ಆತನ ಮನೆಯಲ್ಲೇ ಉಳಿದುಕೊಂಡಿದ್ದ. ಯೋಗೇಶ್ನ ಕಾಲ್ ಟ್ರ್ಯಾಕ್ ಪತ್ತೆ ಮಾಡಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಎಟಿಎಂಗೆ ತುಂಬುವ 64 ಲಕ್ಷ ರೂ. ಹಣ ಕದ್ದ ಯೋಗೇಶ್ ಬಳಿ ಈಗ ಕೇವಲ 15 ಸಾವಿರ ರೂ. ಮಾತ್ರ ಪತ್ತೆಯಾಗಿದೆ. ಉಳಿದ ಹಣವೆಲ್ಲಿ ಎಂದು ಬಾಯಿ ಬಿಡದೆ ಸತಾಯಿಸುತ್ತಿರುವ ಯೋಗೇಶ್ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
PublicNext
11/02/2021 02:57 pm