ಬೆಂಗಳೂರು : ಕಳ್ಳತನ ಮಾಡುವುದರಲ್ಲಿಯೇ ಪಂಟರಾಗಿದ್ದ ಈ ಗ್ಯಾಂಗ್ ಸಿಕ್ಕಿ ಬಿದ್ದಿದ್ದು ಮಾತ್ರ ರೋಚಕವಾಗಿದೆ.
ಥೇಟ್ ಸಿನಿಮಾ ಶೈಲಿಯಲ್ಲಿ ಸ್ಕೆಚ್ ಹಾಕಿ ಕಳ್ಳತನ ಮಾಡುತ್ತಿದ್ದ ಈ ಖತರ್ನಾಕ್ ಗ್ಯಾಂಗ್ ದೊಡ್ಡ ದೊಡ್ಡ ಮನೆಗಳನ್ನೇ ಟಾರ್ಗೆಟ್ ಮಾಡಿ ಯಶಸ್ವಿಯಾಗುತ್ತಿತ್ತು.
ಬರೋಬ್ಬರಿ 50ಕ್ಕೂ ಹೆಚ್ಚು ಪ್ಲಾನ್ ಮಾಡುತ್ತಿದ್ದ ಆ ಗ್ಯಾಂಗ್ ಕಂಬಿಯ ಹಿಂದೆ ಹೋಗಿದೆ. ಕದಿಯಲು ಹೋದ ಮನೆಯ ಅಡುಗೆ ಮನೆಯಲ್ಲಿ ಸೇಬು ಹಣ್ಣು ತಿನ್ನುತ್ತಾ ಕುಳಿತಿದ್ದ ಕಳ್ಳಿಯನ್ನು ಮನೆಯ ಮಾಲೀಕರೇ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೂ ಮಾರೋ ನೆಪದಲ್ಲಿ ಮನೆಗಳ್ಳತನ ಮಾಡಲು ಲೇಡಿ ಖದೀಮರಿಗೆ ಸಹಾಯ ಮಾಡುತ್ತಿದ್ದಳು. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ಅರಿಶಿನಕುಂಟೆಯ ಬಡಾವಣೆಯಲ್ಲಿ ಉದ್ಯಮಿ ರವಿ ಎನ್ನುವವರ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ವೇಳೆ ಈ ಗ್ಯಾಂಗ್ ಸಿಕ್ಕಿಬಿದ್ದಿದೆ.
ಕಲಬುರ್ಗಿ ಜಿಲ್ಲೆ ಚಿತ್ತಾಪುರ ಮೂಲದ ಕಲ್ಯಾಣಿ ಹಾಗೂ ಬಸವರಾಜು, ಬೆಂಗಳೂರಿನ ಬನಶಂಕರಿ ಮೂಲದ ಶಿವಾನಂದ ಹಾಗೂ ಉಷಾ ಬಂಧಿತ ಆರೋಪಿಗಳು. ಹೂ ಮಾರುವ ಸೋಗಿನಲ್ಲಿ ಆರೋಪಿ ಉಷಾ ಕಳೆದ ಕೆಲ ದಿನಗಳಿಂದ ಕಳ್ಳತನ ಮಾಡಲು ಮನೆಯನ್ನು ಸರ್ಚ್ ಮಾಡುತ್ತಿದ್ದಳು.ಯಾವ ಮನೆಯ ಬಾಗಿಲು ತೆಗೆದಿರುತ್ತಿರಲಿಲ್ಲ, ದಿನಪತ್ರಿಕೆ ಬಳಸದೇ ಬಿದ್ದಿರುತ್ತದೆ, ಮನೆಯ ಮುಂದೆ ಕಸ ಗುಡಿಸಿರುವುದಿಲ್ಲ ಎನ್ನುವುದನ್ನು ಗಮನಿಸಿ ಉಳಿದ ಸದಸ್ಯರಿಗೆ ಹೇಳುತ್ತದ್ದಳು.
ಇದೇ ರೀತಿ ನೆಲಮಂಗಲದಲ್ಲಿ ಕಳ್ಳತನದಲ್ಲಿ ತೊಡಗಿದ್ದಾಗ ಹಠಾತ್ತನೆ ಮನೆ ಮಾಲೀಕ ಬಂದಾಗ ಮನೆಯ ಹೊರಗಿದ್ದ ಶಿವಾನಂದ ಪರಾರಿಯಾಗುತ್ತಾನೆ. ಮಾಲೀಕ ರವಿ ಮನೆ ಒಳಗೆ ಎಂಟ್ರಿ ಕೊಡುತ್ತಲೇ ಕಳ್ಳತನ ಮಾಡುತ್ತಿದ್ದ ಬಸವರಾಜು ಕೈಗೆ ಸಿಕ್ಕಿದ್ದನ್ನು ದೋಚಿಕೊಂಡು ಎಸ್ಕೇಫ್ ಆಗಿದ್ದಾನೆ.ಆದರೆ, ಕುಡಿತದ ಮತ್ತಿನಲ್ಲಿದ್ದ ಕಲ್ಯಾಣಿ ಫ್ರಿಡ್ಜ್ ನಲ್ಲಿದ್ದ ಸೇಬು ಹಣ್ಣನ್ನು ತಿನ್ನುತ್ತಾ ಕುಳಿತಿದ್ದನ್ನು ಕಂಡ ಮನೆ ಮಾಲೀಕ ರವಿ ನೆಲಮಂಗಲ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ನಗರ ಪೊಲೀಸರು ಪರಾರಿಯಾಗಿದ್ದ ಆರೋಪಿಗಳಾದ ಕಲ್ಯಾಣಿ, ಶಿವಾನಂದ, ಉಷಾಳನ್ನು ಬಂಧಿಸಿ 17 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಕ್ಕೆ ಪಡೆದಿದ್ದಾರೆ.ಹೆಚ್ಚಿನ ತನಿಖೆ ನಡೆಸಿದಾಗ ಆರೋಪಿ ಕಲ್ಯಾಣ್ ಮೇಲೆ ರಾಜ್ಯದ ಉದ್ದಗಲಕ್ಕೂ 50ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ ಎಂದು ತಿಳಿದುಬಂದಿದೆ.
PublicNext
28/01/2021 09:52 am