ಬಳ್ಳಾರಿ: ಮೂರು ಮಕ್ಕಳ ತಂದೆಯೊಬ್ಬ ಹತ್ತು ವರ್ಷ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಅಮಾನವೀಯ ಘಟನೆ ಬಳ್ಳಾರಿ ತಾಲೂಕಿನ ಮೋಕಾ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.
ವೀರೇಶ (39) ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಅದೇ ಗ್ರಾಮದ ಬಾಲಕಿಯ ಮೇಲೆ ಭಾನುವಾರ ರಾತ್ರಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂಬ ಆರೋಪ ಕೇಳಿ ಬಂದಿದೆ.
ಬಾಲಕಿ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಸ್ನೇಹಿತರ ಜತೆ ಆಟವಾಡುತ್ತಿದ್ದಳು. ಈ ವೇಳೆ ಆರೋಪಿ ವೀರೇಶ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಲವಂತವಾಗಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಬಾಲಕಿಯ ಕಿರುಚಾಟ ಕೇಳಿ ಧಾವಿಸಿ ಬಂದ ತಾಯಿಯು ಅಡ್ಡಿಪಡಿಸಿದ್ದರಿಂದ ಅವರ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಆಕೆಯ ಪೋಷಕರ ಮೇಲೆಯೂ ಆರೋಪಿ ತನ್ನ ಕುಟುಂಬಸ್ಥರೊಂದಿಗೆ ಸೇರಿ ಹಲ್ಲೆ ನಡೆಸಿದ ಎನ್ನಲಾಗಿದೆ.
ಈ ಸಂಬಂಧ ದೂರು ನೀಡಲು ಮೋಕಾ ಠಾಣೆಗೆ ಬಾಲಕಿಯ ಕುಟುಂಬದ ಸದಸ್ಯರು ಹೋಗಿದ್ದರು. ಆದರೆ ದೂರು ಬರೆದುಕೊಂಡು ಬರುವಂತೆ ಹೇಳಿ ಠಾಣೆಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಬಾಲಕಿಯ ಕುಟುಂಬದ ಸದಸ್ಯರು ಗ್ರಾಮೀಣ ಡಿವೈಎಸ್‌ಪಿ ಕಚೇರಿಗೆ ಬಂದು ದೂರು ನೀಡಲು ನಿರ್ಧರಿಸಿದ್ದಾರೆ ಎಂದು ವಕೀಲ ಚಾಗನೂರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಠಾಣೆ ಪಿಎಸ್ಐ ಭರತ್, ಘಟನೆ ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
PublicNext
25/01/2021 10:18 am