ಚಿತ್ರದುರ್ಗ: ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ವ್ಯಕ್ತಿಯೊಬ್ಬ ತನ್ನ ಗೆಳೆಯನನ್ನೇ ಬರ್ಬರವಾಗಿ ಕೊಲೆಗೈದ ಘಟನೆ ಹೊಸದುರ್ಗ ತಾಲೂಕಿನ ವೆಂಗಳಾಪುರ ಗ್ರಾಮದಲ್ಲಿ ನಡೆದಿದೆ.
ವೆಂಗಳಾಪುರದ ಯೋಗರಾಜ್ ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಚಿದಾನಂದ ಹತ್ಯೆಗೈದ ಆರೋಪಿ. ಇವರಿಬ್ಬರ ಸ್ನೇಹ ಮತ್ತು ಸಲುಗೆ ಎರಡೂ ಕುಟುಂಬಗಳ ನಡುವೆ ಬಾಂಧವ್ಯ ಬೆಸೆದಿತ್ತು. ಯೋಗರಾಜ್ ಆಗಾಗ ಚಿದಾನಂದನ ಮನೆಗೆ ಹೋಗಿ ಬರುತ್ತಿದ್ದ. ಅಲ್ಲದೆ ಅವನ ಹೆಂಡತಿ ಜೊತೆ ಸಲಿಗೆಯಿಂದಲೂ ಮಾತನಾಡುತ್ತಿದ್ದ. ಇದರಿಂದಾಗಿ ಚಿದಾನಂದನಿಗೆ ಅನೈತಿಕ ಸಂಬಂಧದ ಅನುಮಾನ ಮೂಡಿ ಆಗಾಗ ಜಗಳ ಕೂಡ ಆಗಿದೆ.
ಚಿದಾನಂದ ತನ್ನ ಅಳಿಯ ವಿನಯ್ ಜೊತೆ ಸೇರಿ ಜ. 15ರಂದು ಯೋಗರಾಜ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಯೋಗರಾಜ ಸಾವನ್ನಪ್ಪಿದ್ದಾನೆ. ಹೆಣ್ಣಿನ ವಿಚಾರಕ್ಕೆ ನಡೆದ ಈ ಕೃತ್ಯ ಜಿಲ್ಲೆಯ ಜನರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.
ಈ ಸಂಬಂಧ ಶ್ರೀರಾಂಪುರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳಲ್ಲಿ ಚಿದಾನಂದ ತಲೆಮರೆಸಿಕೊಂಡಿದ್ದು, ಚಿದಾನಂದನ ಅಳಿಯ ವಿನಯನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
PublicNext
18/01/2021 08:54 am