ವಿಜಯಪುರ: ಗೊತ್ತಿದ್ದೋ, ಗೊತ್ತಿಲ್ಲದೆಯೋ ನಮ್ಮ ನಿರ್ಲಕ್ಷದಿಂದ ನಡೆಯುವ ಎಡವಟ್ಟುಗಳು ಕೆಲವೊಮ್ಮೆ ಅವಾಂತರ ಸೃಷ್ಟಿಸುತ್ತವೆ. ಇದಕ್ಕೆ ಬೆಸ್ಟ್ ಉದಾಹರಣೆ ಪೊಲೀಸ್ ಇಲಾಖೆಯಲ್ಲಿಯೇ ನಡೆದಿದೆ.
ನೇರವಾಗಿ ವಿಷಯಕ್ಕೆ ಬರೋಣ. ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಬಟವಾಳ ಗ್ರಾಮದ ಬಸನಗೌಡ ಸಾಸನೂರ ಅವರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಗೆದ್ದ ಖುಷಿಯಲ್ಲಿ ಸೀದಾ ತಾಳಿಕೋಟೆ ಪೊಲೀಸ್ ಠಾಣೆಗೆ ಬಂದು ಅಲ್ಲಿನ ಸಬ್ ಇನ್ಸ್‌ಪೆಕ್ಟರ್ ಗಂಗೂಬಾಯಿ ಜಿ. ಬಿರಾದಾರ ಅವರಿಗೆ ಹೂಮಾಲೆ ಹಾಕಿ, ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಅಷ್ಟೇ ಅಲ್ಲ ಲೇಡಿ ಸಬ್ ಇನ್ಸ್‌ಪೆಕ್ಟರ್ ಗಂಗೂಬಾಯಿ ಅವರು ಗೆದ್ದ ಅಭ್ಯರ್ಥಿ ಬಸನಗೌಡ ಅವರಿಗೆ ತಾವೇ ಖುದ್ದಾಗಿ ಸಿಹಿ ತಿನಿಸಿದ್ದಾರೆ. ಇಷ್ಟೆಲ್ಲ ಆಗಿದ್ದು ಅದೇ ಪೊಲೀಸ್ ಠಾಣೆಯಲ್ಲಿ!
ಇನ್ಸ್‌ಪೆಕ್ಟರ್ ಗೆ ಸನ್ಮಾನ ಮಾಡಿ ಠಾಣೆಯಿಂದ ಹೊರಬಂದ ಬಸನಗೌಡ ಅವರು ಠಾಣೆ ಹೊರಗೆ ಕೂತಿದ್ದ ಪೊಲೀಸ್ ಪೇದೆ ಶಿವನಗೌಡ ಬಿರಾದಾರ ಅವರಿಗೂ ಶಾಲು ಹೊದಿಸಿ ಸನ್ಮಾನ ಮಾಡಿ ಸಿಹಿ ತಿನಿಸಿದ್ದಾರೆ. ಇಷ್ಟೇ ಆಗಿದ್ದರೆ ಇದು ದೊಡ್ಡ ಇಶ್ಯೂ ಆಗುತ್ತಿತ್ತೋ ಇಲ್ವೋ ಗೊತ್ತಿಲ್ಲ.
ಆದ್ರೆ..ಗೆದ್ದ ಅಭ್ಯರ್ಥಿ ಬಸನಗೌಡ ಸಾಸನೂರ ಅವರೊಂದಿಗೆ ಬಂದಿದ್ದ ಸ್ಥಳೀಯ ಜೆಡಿಎಸ್ ಮುಖಂಡ ಬಸವರಾಜ್ ಭಜಂತ್ರಿ ಅವರು ಈ ಎಲ್ಲ ಸನ್ನಿವೇಶದ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ "ಇಂದು ಬಳವಾಟ ಗ್ರಾಮ ಪಂಚಾಯತ ಸದಸ್ಯರಾಗಿ ನೇಮಕಗೊಂಡ ಬಸನಗೌಡ ಸಾಸನೂರ ರವರು ತಾಳಿಕೋಟಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್(PSI) G G ಬಿರಾದಾರ ಮೇಡಂ ಹಾಗೂ ನಮ್ಮೂರಿನ ಹಿತೈಷಿ, ಪೊಲೀಸ್ ಆರಕ್ಷಕ ಶಿವನಗೌಡ ಬಿರಾದಾರ ಅವರನ್ನು ಭೇಟಿಯಾಗಿ ಗೆಲುವಿಗೆ ಸಹಕರಿಸಿದ್ದಕ್ಕೆ ಗೌರವ ಸನ್ಮಾನ ಮಾಡಿ ಧನ್ಯವಾದವನ್ನು ತಿಳಿಸಲಾಯಿತು ಈ ಸಂದರ್ಭದಲ್ಲಿ ಊರಿನ ಯುವ ಮಿತ್ರರು ಉಪಸ್ಥಿತರಿದ್ದರು ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಪೋಸ್ಟ್ ನ್ನು ಬಸು ಸಾಸನೂರ ಮತ್ತು ಇತರ 3 ಜನರಿಗೆ ಟ್ಯಾಗ್ ಮಾಡಿದ್ದಾರೆ.
ಬಸವರಾಜ್ ಭಜಂತ್ರಿ ಅವರ ಫೇಸ್ ಬುಕ್ ಪೋಸ್ಟ್ ನೋಡಿದ ಜನ ಅದಕ್ಕೆ ವಿರೋಧ ಮಾಡಲಾರಂಭಿಸಿದ್ದಾರೆ. ವಿರೋಧ ಬಂದ ಕೂಡಲೇ ಭಜಂತ್ರಿ ಅವರು ಕೂಡಲೇ ತಮ್ಮ ಪೋಸ್ಟ್ ಡಿಲಿಟ್ ಮಾಡಿದ್ದಾರೆ. ಅಷ್ಟರಲ್ಲೇ ಸಾರ್ವಜನಿಕರಿಂದ ಆ ಪೋಸ್ಟಿನ ಸ್ಕ್ರೀನ್ ಶಾಟ್ ಸಾರ್ವಜನಿಕರಿಂದ ವೈರಲ್ ಆಗಿತ್ತು.
ಸದ್ಯ ಸಬ್ ಇನ್ಸ್‌ಪೆಕ್ಟರ್ ಗಂಗೂಬಾಯಿ ಬಿರಾದಾರ ಹಾಗೂ ಪೇದೆ ಶಿವನಗೌಡ ಬಿರಾದಾರ ಅವರು ಇಲಾಖಾ ಶಿಸ್ತುಕ್ರಮ ಎದುರಿಸುವ ಅಳುಕಿನಲ್ಲಿದ್ದಾರೆ.
PublicNext
03/01/2021 11:22 pm