ಬೆಂಗಳೂರು : ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಹೌದು ಹರ್ಷ ಕೊಲೆ ಪ್ರಕರಣದಲ್ಲಿ 10ನೇ ಆರೋಪಿ ಜಾಫರ್ ಸಾದಿಕ್ (52) ಎಂಬಾತನಿಗೆ ಎನ್ ಐಎ ವಿಶೇಷ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ನೀಡಿದೆ.
ಫೆ.24 ರಂದು ಸಾದಿಕ್ ನನ್ನು ಪೊಲೀಸರು ಬಂಧಿಸಿದ್ದರು. ಇನ್ನು ಆರೋಪಿಯು 50 ಸಾವಿರ ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಶ್ಯೂರಿಟಿ ನೀಡಬೇಕು. ನ್ಯಾಯಾಲಯ ವಿನಾಯಿತಿ ನೀಡದ ಹೊರತು, ಪ್ರತಿ ಬಾರಿ ಪ್ರಕರಣದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ಸಾಕ್ಷ್ಯ ನಾಶ ಮಾಡಬಾರದು. ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗ ಬಾರದು ಎಂದು ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ.
ಸಾದಿಕ್ ಪರ ವಕೀಲರು, 'ಕಕ್ಷಿದಾರರು ಹರ್ಷ ಕೊಲೆ ಪ್ರಕರಣದ ಆರೋಪಿಯಾದ ತಮ್ಮ ಮಗ ಜಿಲಾನ್ಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಬೆಂಗಳೂರಿನ ಸ್ನೇಹಿತನ ಮನೆಯಲ್ಲಿ ಆಶ್ರಯ ಕೊಡಿಸಿದ್ದರು. ಅದನ್ನು ಹೊರತುಪಡಿಸಿದರೆ ಕಕ್ಷಿದಾರರ ವಿರುದ್ಧ ಬೇರೆ ಯಾವುದೇ ಆರೋಪವಿಲ್ಲ' ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿದ್ದರು.
PublicNext
13/10/2022 01:21 pm