ಮುಂಬಯಿ: ಉದ್ಯಮಿ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಶರ್ ಹೌಸ್ ನ್ನು 52.25 ಕೋಟಿಗೆ ಹರಾಜು ಮಾಡಲಾಗಿದೆ. ನಗರದ ವಿಲೆ ಪಾರ್ಲೆಯಲ್ಲಿರುವ ಈ ಹೌಸ್ ನ್ನು ಒಂಬತ್ತನೇ ಪ್ರಯತ್ನದಲ್ಲಿ ಹೈದರಾಬಾದ್ ಮೂಲದ ಸ್ಯಾಟರ್ನ್ ರಿಯಾಲ್ಟರ್ಸ್ ಗೆ 52.25 ಕೋಟಿಗೆ ಮಾರಾಟ ಮಾಡಲಾಗಿದೆ.
ಹಿಂದೆ ಮಲ್ಯ ಮಾಲಿಕತ್ವದ ಹಾಗೂ ಇದೀಗ ಬೀಗ ಹಾಕಿರುವ ಕಿಂಗ್ ಫಿಷರ್ ಏರ್ಲೈನ್ಸ್ ನ ಪ್ರಧಾನ ಕಚೇರಿ ಇದಾಗಿತ್ತು. ಇದಕ್ಕೆ 150 ಕೋಟಿ ರೂಪಾಯಿ ಬೆಲೆ ಕಟ್ಟಲಾಗಿತ್ತು. ಆದರೆ, ಇದೀಗ 52 ಕೋಟಿ ರೂ.ಗೆ ಮಾರಾಟವಾಗಿದೆ. ಮಲ್ಯ ಸುಮಾರು 9,000 ಕೋಟಿ ಮೊತ್ತದ ವಂಚನೆ ಎಸಗಿದ ಆರೋಪ ಎದುರಿಸುತ್ತಿದ್ದಾರೆ.
ಈ ಡೀಲ್ ಗಾಗಿ ಸ್ಯಾಟರ್ನ್ ರಿಯಲ್ಟರ್ಸ್ ಮಹಾರಾಷ್ಟ್ರ ಸರ್ಕಾರಕ್ಕೆ ಸುಮಾರು 2.612 ಕೋಟಿ ಮೊತ್ತದ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದೆ. ಈ ಡೀಲ್ ಅನ್ನು ಕಳೆದ ತಿಂಗಳ ಜುಲೈ 31ರಂದು ನೋಂದಾಯಿಸಲಾಗಿತ್ತು. ಮುಂಬೈನ ವಿಮಾನ ನಿಲ್ದಾಣದ ಹೊರಗಿರುವ ಕಿಂಗ್ ಫಿಷರ್ ಹೌಸ್ 2401.70 ಚದರ ಮೀಟರ್ ವಿಸ್ತೀರ್ಣ ಹೊಂದಿದೆ.
ಪ್ರಸ್ತುತ ಮಲ್ಯ ಬ್ರಿಟನ್ ನಲ್ಲಿ ತಲೆಮರೆಸಿಕೊಂಡಿದ್ದಾರೆ ಹಾಗೂ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯಿಂದ ಪಾರಾಗಲು ಹಲವು ವೇದಿಕೆಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ಏಪ್ರಿಲ್ 2019ರಲ್ಲಿ ಬಂಧನಕ್ಕೊಳಗಾದ ಬಳಿಕ ಅವರು ಹಸ್ತಾಂತರ ವಾರೆಂಟ್ ಮೇಲೆ ಯುಕೆಯಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ.
PublicNext
15/08/2021 07:55 pm