ಪಬ್ಲಿಕ್ ನೆಕ್ಸ್ಟ್ ವಿಶೇಷ ಸಂಪಾದಕೀಯ : ಕೇಶವ ನಾಡಕರ್ಣಿ
ಕರ್ನಾಟಕದ ಶಿಕ್ಷಣ ಕಾಶಿ, ಸುಂದರ ಕಡಲ ಕಿನಾರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಮತ್ತೆ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಮತ್ತೊಂದು ದುರಂತ ಸಂಭವಿಸಿದೆ.
ದಸರಾ ವೈಭವ ಮೆರಗಿನ, ಯಕ್ಷಗಾನದ ತವರೂರಿನ ನಾಡಿಗೆ... ಸಾಲು ಸಾಲು ಕೊಲೆಗಳ ಕಳಂಕ ಅಂಟಿಕೊಳ್ಳುತ್ತಿರುವುದು ನಿಜಕ್ಕೂ ದುರ್ದೈವದ ಸಂಗತಿ.
ಕೋಮು ಭಾವನೆ ಕೆರಳಿಸುವ ರಾಜಕಾರಣಿಗಳಿಗೇನೂ ಇಲ್ಲಿ ಕೊರತೆ ಇಲ್ಲ. ಆದರೆ ಇದಕ್ಕೆ ಬಲಿಯಾಗುತ್ತಿರುವವರು ಅಮಾಯಕರು.
ಬುದ್ಧಿವಂತರ ಜಿಲ್ಲೆ ಖ್ಯಾತಿಯ ಮಂಗಳೂರು ಬುದ್ಧಿಗೇಡಿಗಳ ಕೃತ್ಯದಿಂದ ದೇಶದಲ್ಲಿಯೇ ತಲೆ ತಗ್ಗಿಸುವಂತಾಗಿದೆ.
ಒಂದು ಕೋಮಿನ ವ್ಯಕ್ತಿಯ ಕೊಲೆಯಾದರೆ ಮತ್ತೊಂದು ಕೋಮಿನ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗುತ್ತದೆ.
ಇದಕ್ಕೆ ಹೇಡಿ ಸರಕಾರದ ಸಮರ್ಥತೆಯೂ ಕಾರಣ ಎಂದು ಮತ್ತೆ ಮತ್ತೆ ಹೇಳಬೇಕಾಗಿಲ್ಲ.
ಹಾಗಾದ್ರೆ ರಾಜಕೀಯ ಪ್ರಚೋದನೆ, ಕೋಮು ದ್ವೇಷಕ್ಕೆ ಕೊನೆಯೇ ಇಲ್ಲವೆ?
ರಾಜಕೀಯ ಲಾಲಸೆಗೆ ಕೆಲವರು ಹಚ್ಚುವ ಕೋಮು ದಳ್ಳುರಿಗೆ ಇನ್ನು ಎಷ್ಟು ಯುವಕರು ಬಲಿಯಾಗಬೇಕು?
ಪ್ರತಿಕಾರದ ಅಮಲಿನಲ್ಲಿ ತೇಲಾಡುತ್ತಿರುವ ಯುವ ಸಮುದಾಯ ತಮ್ಮ ಭವಿಷ್ಯವನ್ನೇ ನಾಶ ಮಾಡಿಕೊಳ್ಳುತ್ತಿದೆ. ಜೀವ ಕಳೆದುಕೊಂಡಾತ ಹಿಂದೂ ಇರಲಿ ಮುಸ್ಲಿಂ ಇರಲಿ ಸಾವು ಸಾವೇ ಅಲ್ಲವೆ? ಇವರನ್ನು ನಂಬಿದ ಕುಟುಂಬದ ಗತಿ ಏನು?
ಇಂತಹ ಕೃತ್ಯಗಳಿಂದ ಯುವ ಸಮುದಾಯ ಸಾಧಿಸುತ್ತಿರುವುದಾದರೂ ಏನು? ಮಾನವೀಯತೆ ಸಮಾಧಿ ಮೇಲೆ ಕೌರ್ಯ ಅಟ್ಟಹಾಸ ಮೆರೆಯುತ್ತಿದೆ.
ಅಮಾಯಕರು ಅಮಾನುಷ ರೀತಿಯಲ್ಲಿ ಕೊಲೆಯಾಗುವುದೆಂದರೆ ಏನು? ನಮ್ಮ ನಾಗರಿಕ ಸಮಾಜ ಎತ್ತ ಸಾಗುತ್ತಿದೆ? ಎಂದು ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಚೋದನೆಗೊಳಗಾಗಿ ಕೊಲೆಪಾತಕರಾಗುತ್ತಿರುವ ಯುವಕರನ್ನು ಸರಿದಾರಿಗೆ ತರುವ ಪ್ರಯತ್ನ ಯಾರೂ ಮಾಡದಿರುವುದು ನಿಜಕ್ಕೂ ದುರದೃಷ್ಟಕರ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾದ ಮುಖಂಡ 31 ವರ್ಷ ಪ್ರವೀಣ್ ಕುಮಾರ್ ನೆಟ್ಟಾರು ಎಂಬಾತನನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿದೆ. ನಿಜಕ್ಕೂ ಇದು ಖಂಡನೀಯ.
ನೋಡಿ.... ಈ ದೃಷ್ಕೃತ್ಯ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಹಾಗೂ ಕೆಲವು ಮತೀಯ ಸಂಘಟನೆಗಳ ಪ್ರಚಾರಕ್ಕೆ ಆಹಾರವಾಗುತ್ತೆ ಹೊರತು ಬೇರೇನೂ ಆಗದು. ಆಯಾ ಸಮುದಾಯದ ಯುವಕರಿಗೆ ಬುದ್ಧಿ ಮಾತು ಹೇಳಿ, ಅದನ್ನು ಹೇಗೆ ತಡೆಯಬಹುದು ಎಂದು ಯಾರೂ ಯೋಚಿಸುವುದಿಲ್ಲ.
ಕೆಲವರಿಗಂತೂ ಅದು ಬೇಕಾಗಿಯೂ ಇಲ್ಲ. ಏಕೆಂದ್ರೆ ಅವರಿಗೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕಾಗಿದೆ.
ಹೆಚ್ಚೆಂದರೆ ಬಿಜೆಪಿ ನಾಯಕರು ಹತ್ಯೆ ಖಂಡಿಸಿ ಭಾಷಣ ಬಿಗಿಯುತ್ತಾರೆ. ಹತ್ಯೆಗೀಡಾದ ಯುವಕನ ಮನೆಗೆ ಭೇಟಿ ನೀಡಿ ಸಾಂತ್ವನದ ನೆಪದಲ್ಲಿ ಕಣ್ಣೀರು ಸುರಿಸುತ್ತಾರೆ. ಅಲ್ಲಲ್ಲಿ ಪ್ರತಿಭಟನಾ ಮೆರವಣಿಗೆ ಆಗುತ್ತವೆ.
ಇದಕ್ಕೆ ಪ್ರತಿಯಾಗಿ....ಬಿಜೆಪಿಯ ಕೋಮು ಪ್ರಚೋದನೆಯೇ ಇದಕ್ಕೆ ಕಾರಣ ಎಂದು ಕಾಂಗ್ರೆಸ್. ಜೆಡಿಎಸ್ ನಾಯಕರು ಆರೋಪಿಸುತ್ತಾರೆ. ಇದು ಮಾಮೂಲು ಎನ್ನುಂತಾಗಿದೆ. ನಮ್ಮ ದೇಶದಲ್ಲಿ ಪ್ರತಿಯೊಂದು ಅಹಿತಕರ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಖೇದದ ಸಂಗತಿ.
ತಪ್ಪಿತಸ್ಥರು ಯಾರೇ ಇರಲಿ ಅವರನ್ನು ಬಂಧಿಸಿ ಶಿಕ್ಷೆ ಕೊಡಿಸ್ತಿವಿ, ಮುಂದೆ ಈ ರೀತಿ ಯಾವುದೇ ಘಟನೆ ಸಂಭವಿಸದಂತೆ ಕ್ರಮ ಕೈಗೊಳ್ತೆವೆ ಅಂತ ಮುಖ್ಯಮಂತ್ರಿಗಳೋ, ಗೃಹ ಮಂತ್ರಿಗಳೋ ಒಂದು ಸರಕಾರಿ ಹೇಳಿಕೆ ನೀಡಿ ಕೈ ತೊಳೆದುಕೊಳ್ತಾರೆ.
ಕೆಲವು ದಿನಗಳ ನಂತ್ರ ನಾವು,,,ನೀವು,,,ಈ ರಾಜಕೀಯ ನಾಯಕರು ಎಲ್ಲವನ್ನೂ ಮರೆತು ಬಿಡುತ್ತೇವೆ. ಆದ್ರೆ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬದ ಪರಿಸ್ಥಿತಿ ಆ ದೇವರೇ ಬಲ್ಲ. ಅವರಿಗಾದ ನಷ್ಟವನ್ನು ಯಾರಿಂದಲೂ ತುಂಬಿಕೊಡಲು ಸಾಧ್ಯವಿಲ್ಲ.
ಕೆಲವು ದಿನಗಳ ಹಿಂದೆ ಕಾಸರಗೋಡು ಮೂಲದ ಯುವಕನ ಮೇಲೆ ಹಿಂದೂ ಯುವಕರ ಗುಂಪು ಹಲ್ಲೆ ನಡೆಸಿತ್ತು, 2 ದಿನಗಳ ನಂತರ ಮಂಗಳೂರಿನ ಆಸ್ಪತ್ರೆಯಲ್ಲಿ ಯುವಕ ಸಾವನ್ನಪ್ಪಿದ್ದ.
ಈ ಘಟನೆ ಬಳಿಕ ಸಹಜವಾಗಿ ಮುಸ್ಲಿಂ ಸಂಘಟನೆಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದವು.
ಮುಸ್ಲಿಂ ಯುವಕನ ಮೇಲೆ ಹಿಂದೂ ಯುವಕರ ಗುಂಪು ಹಲ್ಲೆ ನಡೆಸಿದ್ದು ಸಹ ಖಂಡನೀಯ. ಒಂದು ವೇಳೆ ಆ ಯುವಕ ವ್ಯತಿರಿಕ್ತವಾಗಿ ವರ್ತಿಸಿದ್ದರೆ ಸಂಬಂಧಪಟ್ಟವರು ಪೊಲೀಸರಿಗೆ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಯಾವ ನ್ಯಾಯ? ಕಾನೂನನ್ನು ಕೈಗೆತ್ತಿಕೊಳ್ಳಲು ನಿಮಗೆ ಅಧಿಕಾರ ನೀಡಿವರು ಯಾರು?
ಯುವಕನ ಸಾವಿನ ಪ್ರತೀಕಾರ ತೆಗೆದುಕೊಳ್ಳುವ ಪೋಸ್ಟಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವಂತೆ. ಆಗಲೇ ಪೊಲೀಸರು ಎಚ್ಚೆತ್ತುಕೊಂಡಿದ್ದರೆ ಮತ್ತೊಂದು ಕೊಲೆಯನ್ನು ತಡೆಯಬಹುದಿತ್ತಲ್ಲವೆ? ಇದಾದ ಎರಡೇ ದಿನಗಳಲ್ಲಿ ಈ ಹತ್ಯೆ ನಡೆದಿದೆ. ಇಲ್ಲಿ ಸರಕಾರದ ವೈಫಲ್ಯವನ್ನೂ ತಳ್ಳಿ ಹಾಕವಂತಿಲ್ಲ.
ಈ ಕೋಮು ದ್ವೇಷದ, ಪ್ರತಿಕಾರದ ಕೊಲೆಗಳು ನಿಲ್ಲಬೇಕು. ಆಯಾ ಸಮುದಾಯದ ನಾಯಕರು ಪ್ರಚೋದನಾತ್ಮಕ ಮಾತುಗಳಿಗೆ ಕಡಿವಾಣ ಹಾಕಬೇಕು.
ಕೋಮು ದ್ವೇಷದ ಮನೋಭಾವ ತ್ಯಜಿಸೋಣ,,, ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿ ತೋಟ ಎಂಬುದನ್ನು ಸಾಬೀತು ಪಡಿಸೋಣ.
PublicNext
28/07/2022 02:13 pm