ವನ್ಯ ಜೀವಿಗಳ ಮೇಲೆ ಮಾನವ ತನ್ನ ಕ್ರೌರ್ಯವನ್ನು ಮುಂದುರಿಸಿದ್ದಾನೆ. ಕಳೆದ ವರ್ಷ ಮೇ 27ರಂದು ಕೇರಳದ ಮಣಪ್ಪುರಂನಲ್ಲಿ ನಡೆದಿದ್ದ ಗರ್ಭಿಣಿ ಆನೆ ಕೊಲೆ ಪ್ರಕರಣಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಘಟನೆ ಮಾಸುವ ಮುನ್ನವೇ ತಮಿಳುನಾಡಿನಲ್ಲಿ ಇಂತಹದ್ದೇ ದುಷ್ಕೃತ್ಯ ನಡೆದಿದೆ.
ದುರುಳರ ಗುಂಪೊಂದು ಆನೆಗೆ ಬೆಂಕಿ ಇಟ್ಟು ಕೊಂದು ಹಾಕಿರುವ ಘಟನೆ ತಮಿಳುನಾಡಿನ ನೀಲಗಿರಿಯಲ್ಲಿ ಜನವರಿ ೧೯ರಂದು ನಡೆದಿದೆ. ಇಲ್ಲಿನ ಮಾಸಿನಗುಡಿ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದ್ದು, ಚಿಕಿತ್ಸೆಗೆಂದು ಅರಣ್ಯ ಇಲಾಖೆಯ ಆಸ್ಪತ್ರೆಗೆ ಕರೆತಂದಿದ್ದ ಆನೆ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದೆ.
ಆನೆಯು ರೆಸಾರ್ಟ್ ಒಳಗೆ ಹೋಗಲು ಯತ್ನಿಸಿತ್ತು. ಈ ವೇಳೆ ಆನೆಯನ್ನು ಬೆದರಿಸಲು ಎಸ್ಟೇಟ್ ಕಾಯುತ್ತಿದ್ದ ರೈಮಾನ್ ಹಾಗೂ ಪ್ರಶಾಂತ್ ದುಷ್ಕೃತ್ಯ ಮೆರೆದಿದ್ದಾರೆ. ಆಗ ಆನೆಯ ತಲೆಗೆ ಬೆಂಕಿ ಹೊತ್ತಿಕೊಂಡಿದ್ದು, ಭಾರೀ ಯಾತನೆಯಲ್ಲಿ ನರಳುತ್ತಿತ್ತು. ಇದನ್ನು ಕಂಡ ಅರಣ್ಯ ಸಿಬ್ಬಂದಿ ಆನೆಯನ್ನು ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ 40 ವರ್ಷದ ಆನೆ ಅಸುನೀಗಿದೆ. ಆನೆಯನ್ನು ಉಳಿಸಿಕೊಳ್ಳಲಾಗದ ಫಾರೆಸ್ಟ್ ರೇಂಜರ್ ಅಧಿಕಾರಿಯೊಬ್ಬರು ಕಣ್ಣೀರು ಹಾಕುತ್ತಿರುವ ವಿಡಿಯೋ ಎಲ್ಲರ ಕಣ್ಣಂಚುಗಳನ್ನು ಒದ್ದೆ ಮಾಡಿದೆ.
ಆನೆಯ ಮೃತದೇಹದ ಮುಂದೆ ಫಾರೆಸ್ಟ್ ರೇಂಜರ್ ಕಣ್ಣೀರು ಹಾಕಿರುವ ಭಾವನಾತ್ಮಕ ವಿಡಿಯೋ ವೈರಲ್ ಆಗಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚಿದವನನ್ನೂ ಸೇರಿದಂತೆ ಇಬ್ಬರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
PublicNext
24/01/2021 02:28 pm