ಮುಂಬೈ: ದೇಶದ ದೈತ್ಯ ಸೆಲೆಬ್ರಿಟಿಗಳಿಗೆ ಆಗಾಗೇ ಅಂಟಿಕೊಳ್ಳುವ ಮಾದಕ ಲೋಕದ ಮಸಿ ಸಿನಿಪ್ರಿಯರಿಗೆ ಅವರವರ ತಾರೆಯರ ಮೇಲಿನ ಅಭಿಮಾನ ಕಡಿಮೆಯಾಗುವಂತೆ ಮಾಡುತ್ತಿದೆ. ದೇಶಾದ್ಯಂತ ಮತ್ತಿನ ಲೋಕಕ್ಕೆ ಶಾಶ್ವತ ಬೀಗ ಹಾಕಲು ಎನ್‌ಸಿಬಿ ಟೊಂಕ ಕಟ್ಟಿದೆ. ಅದರಂತೆ ನಿನ್ನೆ (ಭಾನುವಾರ) ಮುಂಬೈನ ಕಡಲ ತೀರದಲ್ಲಿದ್ದ ಐಷಾರಾಮಿ ಕ್ರೂಸ್ ಮೇಲೆ ಎನ್‌ಸಿಬಿ ಮಾಡಿರುವ ರೋಚಕ ದಾಳಿ ಭಾರೀ ಬಿರುಗಾಳಿ ಎಬ್ಬಿಸಿದೆ.
ಈ ಬಾರಿ ಎನ್‌ಸಿಬಿ ಬಲೆಗೆ ಬಿದ್ದಿದ್ದು, ವಿಶ್ವದ ಎರಡನೇ ಶೀಮಂತ ನಟ, ಬಾಲಿವುಡ್ ಬಾದ್ ಶಾ ಖ್ಯಾತಿಯ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್. ಎನ್‌ಸಿಬಿ ತಂಡವು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಒಟ್ಟು 8 ಮಂದಿಯನ್ನು ಬಂಧಿಸಿದೆ. ಇದರಲ್ಲಿ ಇನ್ನೂ ಹಲವು ನಟರು ಇದ್ದು ಅವರ ಹೆಸರುಗಳನ್ನು ಅಧಿಕಾರಿಗಳು ಗೋಪ್ಯವಾಗಿರಿಸಿದ್ದಾರೆ.
ಈ ಸಂದರ್ಭದಲ್ಲಿ ಕ್ರೂಸ್‌ನಲ್ಲಿ ಪಾರ್ಟಿ ಮಾಡಲು ತಂದಿದ್ದ ಕೊಕೇನ್, ಹಶೀಶ್ ಮತ್ತು ಎಂಡಿಎಂಎ ಸೇರಿದಂತೆ ಅನೇಕ ಅಕ್ರಮ ಡ್ರಗ್ಸ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಡುವೆಯೇ ಪರೀಕ್ಷೆ ಮಾಡಿದಾಗ ಆರ್ಯನ್ ಖಾನ್ ಚರಸ್ ಸೇವನೆ ಮಾಡಿರುವುದು ಬೆಳೆಕಿಗೆ ಬಂದಿದೆ.
ಎರಡು ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ ಐಷಾರಾಮಿ ಕ್ರೂಸ್ಲ್ಲಿ ಶನಿವಾರ ರಾತ್ರಿ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಸುಮಾರು 500 ಗ್ರಾಹಕರನ್ನು ಹೊತ್ತಿದ್ದ ಹಡಗು ಸಂಜೆ ವೇಳೆ ಮುಂಬೈ ಕಡಲಿನಿಂದ ಹೊರಟಿತ್ತು. ಹಡಗಿನಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಲಾಗಿದೆ ಅನ್ನೋ ಖಚಿತ ಮಾಹಿತಿಯನ್ನು ಎನ್‌ಸಿಬಿ ಅಧಿಕಾರಿಗಳು 15 ದಿನಗಳ ಮುನ್ನವೇ ಕಲೆ ಹಾಕಿದ್ದರು. ಆದರೆ ಅದರಲ್ಲಿ ಯಾರು ಭಾಗಿಯಾಗುತ್ತಿದ್ದಾರೆ ಎಂದು ತಿಳಿದಿರಲಿಲ್ಲ. ಖದೀಮರಿಗಾಗಿ ಅವರು ಮೊದಲೇ ಬಲೆ ಬೀಸಿದ್ದರು.
ಡ್ರಗ್ಸ್ ಸೇವನೆ ಮಾಡುವ ಅತಿಥಿಗಳ ಸೋಗಿನಲ್ಲಿ ಕ್ರೂಸ್ ಹಡಗು ಏರಿದ್ದರು ಎನ್‌ಸಿಬಿ ಸಿಬ್ಬಂದಿ. ದಾಳಿ ವೇಳೆ ಸೆಲೆಬ್ರಿಟಿಗಳು, ಅವರ ಸಂಬಂಧಿಕರನ್ನು ಕಂಡು ಖುದ್ದು ಅಧಿಕಾರಿಗಳೇ ಶಾಕ್ ಆಗಿದ್ದರು. ಈ ಪಾರ್ಟಿಗೆ ಎಂಟ್ರಿ ಫೀ 80 ಸಾವಿರ ರೂಪಾಯಿ. ಪಾರ್ಟಿ ಆಯೋಜಿಸಿದ್ದ ಕಾಡೇಲಿಯಾ ಹಡಗು ಶನಿವಾರ ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ಮುಂಬೈ ತೀರದಿಂದ ಸಮುದ್ರಯಾನ ಆರಂಭಿಸಿತ್ತು. ಮೂರು ದಿನಗಳ ಪ್ರವಾಸದ ಬಳಿಕ ಅ.4ರಂದು ರಾತ್ರಿ ಮುಂಬೈಗೆ ಮರಳಲು ಯೋಜಿಸಲಾಗಿತ್ತು.
ಈ ನಡುವೆ ಕಾರ್ಡಿಲಿಯಾ ಕ್ರೂಸ್ ಶಿಪ್ ಮಾಲೀಕನನ್ನು ವಿಚಾರಿಸಿದಾಗ ರೇವ್ ಪಾರ್ಟಿಗೂ ನಮಗೂ ಸಂಬಂಧ ಇಲ್ಲವೆಂದಿದ್ದಾರೆ. ಸದ್ಯ ಆರ್ಯನನ್ನು ಅ.4ರವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಲಾಗಿದೆ. 'ಪಠಾಣ್' ಸಿನಿಮಾದ ಶೂಟಿಂಗ್‌ಗಾಗಿ ಶಾರುಖ್ ಸ್ಪೇನ್ಗೆ ತೆರಳಬೇಕಿತ್ತು. ಆದರೆ ಮಗ ಕಸ್ಟಡಿಯಲ್ಲಿ ಇರುವ ಕಾರಣ, ಶೂಟಿಂಗ್ ಕ್ಯಾನ್ಸಲ್ ಮಾಡಿದ್ದಾರೆ.
PublicNext
04/10/2021 12:48 pm