ಬೆಂಗಳೂರು: ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ವಿರೇನ್ ಖನ್ನಾಗೆ ಸಹಕರಿಸಿದ್ದ ಸಿಸಿಬಿ ಎಸಿಪಿ ಹಾಗೂ ಹೆಡ್ ಕಾನ್ಸ್ಟೇಬಲ್ ಅನ್ನು ಅಮಾನತು ಮಾಡಲಾಗಿದೆ.
ವಿರೇನ್ ಸಹಚರರೊಂದಿಗೆ ಸಿಸಿಬಿ ಎಸಿಪಿ ಮುದವಿ ಹಾಗೂ ಹೆಡ್ ಕಾನ್ಸ್ಟೇಬಲ್ ಮಲ್ಲಿಕಾರ್ಜುನ ಅವರು ತನಿಖೆಯ ಗೌಪ್ಯ ಮಾಹಿತಿ ಸೋರಿಕೆ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನಲೆ ಅವರಿಬ್ಬರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಆರೋಪಿ ವಿರೇನ್ ಖನ್ನಾ ಕುರಿತ ಮಾಹಿತಿಯನ್ನು ಮುದವಿ ಹಾಗೂ ಮಲ್ಲಿಕಾರ್ಜುನ ಆತನ ಸಹಚರರಿಗೆ ನೀಡುತ್ತಿದ್ದರು. ಆರೋಪಿಗಳ ಮೊಬೈಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರೂ ರಾತ್ರಿ ಸಮಯದಲ್ಲಿ ಅವರಿಗೆ ಮೊಬೈಲ್ ಕೊಟ್ಟಿದ್ದರು. ಮಾಹಿತಿ ಸೋರಿಕೆ ಮಾಡಲು ಆರೋಪಿ ಜೊತೆಗೆ ಎಸಿಪಿ ಡೀಲ್ ಕುದುರಿಸಿದ್ದರು ಎನ್ನಲಾಗಿದೆ.
ಡ್ರಗ್ಸ್ ಪ್ರಕರಣದ ತನಿಖೆಯಲ್ಲಿ ಆರೋಪಿಗಳ ಜೊತೆ ಪೊಲೀಸರೇ ಸಂಪರ್ಕ ಹೊಂದಿರುವ ಬಗ್ಗೆ ಜಂಟಿ ಪೊಲೀಸ್ ಆಯುಕ್ತರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದರು. ಈ ವರದಿ ಬಳಿಕ ರಾಜ್ಯ ಸರ್ಕಾರ ಇಬ್ಬರನ್ನೂ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
PublicNext
23/09/2020 07:18 pm