ಬೆಂಗಳೂರು: ಇನ್ ಸ್ಟಾಗ್ರಾಂನಲ್ಲಿ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡ ಮೋಸಗಾರನೊಬ್ಬ ಆಕೆಯೊಂದಿಗೆ ಪ್ರೀತಿ-ಪ್ರೇಮದ ನಾಟಕವಾಡಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ 2 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ನಗರದ ಬಾಣಸವಾಡಿಯಲ್ಲಿ ನಡೆದಿದೆ.
ಪಾಂಡಿಚೇರಿ ಮೂಲದ ಕಾರ್ತಿಕ್ ವಂಚಕ. ಆತನ ವಿರುದ್ಧ ವಂಚನೆಗೊಳಗಾದ ಯುವತಿ ದೂರು ನೀಡಿದ್ದು ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಎ.ನಾರಾಯಣಪುರದ ಯುವತಿಗೆ ಕಳೆದ 2017ರಲ್ಲಿ ಇನ್ ಸ್ಟಾಗ್ರಾಂ ಮೂಲಕ ಪರಿಚಯವಾದ ಕಾರ್ತಿಕ್, ಮೊಬೈಲ್ ನಂಬರ್ ತೆಗೆದುಕೊಂಡು ವ್ಯಾಟ್ಸ್ ಆ್ಯಪ್ನಲ್ಲಿ ಮಾತುಕತೆ ನಡೆಸುತ್ತಿದ್ದ. 2018ರಲ್ಲಿ ಶಾಪಿಂಗ್ ಮಾಲ್ ವೊಂದರಲ್ಲಿ ಇಬ್ಬರು ಭೇಟಿ ಕೂಡ ಆಗಿದ್ದರು. ಆ ವೇಳೆ ಯುವಕ ತಾನು ಪ್ರತಿಷ್ಟಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಬಾಣಸವಾಡಿಯಲ್ಲಿ ಕಚೇರಿ ಇದೆ ಎಂದು ಆಕೆ ಮುಂದೆ ಹೇಳಿಕೊಂಡಿದ್ದ. ಇದಾದ ನಂತರ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಯುವಕ ಮೂರು ತಿಂಗಳಿಗೊಮ್ಮೆ ಬೆಂಗಳೂರಿಗೆ ಆಗಮಿಸಿ ಯುವತಿಯನ್ನು ಭೇಟಿ ಮಾಡುತ್ತಿದ್ದ ಎನ್ನಲಾಗಿದೆ.
ಈ ನಡುವೆ ತಾನು ಭೇಟಿಗಾಗಿ ಬಂದಾಗಲೆಲ್ಲಾ ಸ್ವಲ್ಪ ಸ್ವಲ್ಪ ಹಣ ಅಥವಾ ಚಿನ್ನವನ್ನು ಕೊಂಡೊಯ್ದಿದ್ದ. ಹೋಗೆ ಒಟ್ಟಾರೆ ಎರಡು ಲಕ್ಷ ನಗದು ಹಾಗೂ ೬ ಗ್ರಾಂ ಚಿನ್ನದ ಉಂಗುರ ತೆಗೆದುಕೊಂಡು ಹೋಗಿದ್ದಾಗಿ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಾಗಲ್ ಪ್ರೇಮಿಯನ್ನು ಹುಡುಕುತ್ತಿದ್ದಾರೆ.
PublicNext
01/12/2020 08:08 am