ಮೈಸೂರು: ಖಾಸಗಿ ವೈದ್ಯರೊಬ್ಬರನ್ನು ಹನಿಟ್ರಾಪ್ ಜಾಲಕ್ಕೆ ಬೀಳಿಸಿ ಲಕ್ಷಾಂತರ ಹಣ ವಸೂಲಿ ಮಾಡಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಮೈಸೂರಿನ ಪೊಲೀಸರು ಬೇಧಿಸಿದ್ದಾರೆ.
ಮೈಸೂರಿನ ಪಿರಿಯಾಪಟ್ಟಣ ನಿವಾಸಿಗಳಾದ ನವೀನ್, ಶಿವರಾಜು, ಹರೀಶ್, ವಿಜಿ ಮತ್ತು ಅನಿತಾ ಬಂಧಿತರು. ಅನಿತಾಳನ್ನು ಮುಂದಿಟ್ಟ ಈ ಗ್ಯಾಂಗ್ ಮೈಸೂರಿನ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರನ್ನ ಹನಿಟ್ರಾಪ್ ಜಾಲಕ್ಕೆ ಬೀಳಿಸಿತ್ತು. ಬಳಿಕ ಒಂದು ಕೋಟಿ ರೂ.ಗೆ ಬೇಡಿ ಇಟ್ಟಿತ್ತು. ಒಂದು ವೇಳೆ ಹಣ ಕೊಡದಿದ್ದರೆ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇವೆ ಎಂದು ಆರೋಪಿಗಳು ಬೆದರಿಸಿದ್ದರು.
ಆರೋಪಿಗಳ ಬೆದರಿಕೆಗೆ ಹೆದರಿದ ವೈದ್ಯ 2019 ಡಿಸೆಂಬರ್‌ನಿಂದ 2020 ಅಕ್ಟೋಬರ್ ತಿಂಗಳವರೆಗೂ 31,30,000 ರೂ. ನೀಡಿದ್ದಾರೆ. ಆದರೆ ಈ ಗ್ಯಾಂಗ್ ಇನ್ನಷ್ಟು ಹಣ ನೀಡುವಂತೆ ಒತ್ತಾಯಿಸಿತ್ತು. ಇದರಿಂದ ಬೇಸತ್ತ ಅವರು ಪಿರಿಯಾಪಟ್ಟಣ ಬಿಟ್ಟು ಮೈಸೂರು ನಗರಕ್ಕೆ ಬಂದು ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಹನಿಟ್ರಾಪ್ಗೆ ಬಳಕೆಯಾಗಿದ್ದ ಯುವತಿ ಸೇರಿದಂತೆ 5 ಆರೋಪಿಗಳನ್ನು ಬಂಧಿಸಿ ಕೋರ್ಟಿಗೆ ಹಾಜರು ಪಡಿಸಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
PublicNext
20/11/2020 11:34 am