ಹೈದರಾಬಾದ್: ಕುಡಿದ ನಶೆಯಲ್ಲಿ ಪತ್ನಿಯನ್ನ ಕೊಲೆಗೈದು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದ ಪತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ವಿಕಾರಬಾದ್ ಜಿಲ್ಲೆಯ ಅನಂತಗಿರಿಯಲ್ಲಿ ನಡೆದಿದೆ.
27 ವರ್ಷದ ಸಂತೋಷಿ ಎಂಬಾಕೆಯೇ ಪತಿ ಪ್ರಭುನಿಂದ ಕೊಲೆಯಾದ ಮಹಿಳೆ. ಸಂತೋಷಿ ಮತ್ತು ಪ್ರಭು ಮದುವೆ 2007ರಲ್ಲಿ ಆಗಿತ್ತು. ದಂಪತಿಗೆ ನಾಲ್ಕು ಮಕ್ಕಳು ಸಹ ಇವೆ. ಮೃತ ಸಂತೋಷಿ ಪ್ರತಿನಿತ್ಯ ಪತಿ ಜೊತೆ ಜಗಳ ಮಾಡುತ್ತಿದ್ದಳು. ನವೆಂಬರ್ 5ರಂದು ಪ್ರಭು ಮದ್ಯ ಸೇವಿಸಿ ಬಂದಾಗ ಸಂತೋಷಿ ಗಲಾಟೆ ಮಾಡಿದ್ದಾಳೆ ಎನ್ನಲಾಗಿದೆ.
ಈ ವೇಳೆ ಕೋಪಗೊಂಡ ಪ್ರಭು ಪತ್ನಿಯನ್ನು ಹೊಡೆದು ಕೊಲೆ ಮಾಡಿದ್ದಾನೆ. ನಂತರ ಯಾರಿಗೂ ತಿಳಿಯದಂತೆ ಮೃತದೇಹವನ್ನು ಅರಣ್ಯಕ್ಕೆ ಕೊಂಡೊಯ್ದು ಬೆಂಕಿ ಹಾಕಿ ಸುಟ್ಟು ಹಾಕಿದ್ದಾನೆ. ನಂತರ ಪತ್ನಿ ಕಾಣೆಯಾಗಿದ್ದಾಳೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಟ್ಟು ಕಣ್ಣೀರಿಟ್ಟಿದ್ದಾನೆ.
ಕೇಸ್ ದಾಖಲಿಸಿಕೊಂಡ ಪೊಲೀಸರಿಗೆ ಪ್ರಭು ಮೇಲೆ ಸಂಶಯ ಬಂದಿದೆ. ವಿಚಾರಣೆಗಾಗಿ ಕರೆಸಿಕೊಂಡು ಪೊಲೀಸ್ ಭಾಷೆಯಲ್ಲಿ ಗದರಿಸಿ ವಿಚಾರಿಸಿದಾಗ ಪ್ರಭು ತಪ್ಪೊಪ್ಪಿಕೊಂಡಿದ್ದಾನೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ವೇಳೆಯೂ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ನ್ಯಾಯಾಧೀಶರು ಈ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
PublicNext
17/11/2020 09:34 pm