ನವದೆಹಲಿ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆ ವಿರೋಧಿಸಿ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಹೆಸರಿನಲ್ಲಿ ನಿನ್ನೆ ಮಂಗಳವಾರ ದೆಹಲಿಯಲ್ಲಿ ಹಿಂಸಾಚಾರ ಕೃತ್ಯ ನಡೆದಿದೆ. ಪಂಜಾಬ್ ನ ಪ್ರತಿ ಹಳ್ಳಿಯಿಂದಲೂ ಸಾವಿರಾರು ರೂಪಾಯಿ ಡೀಸೆಲ್ ಹಾಕಿಸಿಕೊಂಡು ಟ್ರ್ಯಾಕ್ಟರ್ ನಲ್ಲಿ ಬಂದವರು ಉದ್ದೇಶಪೂರ್ವಕವಾಗಿ ಹಿಂಸೆಗೆ ಇಳಿದಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಇದಾಗಲೇ ಏಳು ಮಂದಿಯ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಪೂರ್ವ ಜಿಲ್ಲೆ ಮತ್ತು ದ್ವಾರಕಾದಲ್ಲಿ ತಲಾ ಮೂರು ಮತ್ತು ಶಹದಾರ ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಿಸಲಾಗಿದೆ. ಇನ್ನೂ ಹೆಚ್ಚಿನ ಜನರ ವಿರುದ್ಧ ಎಫ್ ಐಆರ್ ದಾಖಲಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ 86 ಮಂದಿ ಗಾಯಗೊಂಡಿದ್ದಾರೆ. ನಾಲ್ಕು ಗಡಿಗಳಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿತ್ತು, ಅದಕ್ಕಾಗಿ ಕೆಲವೊಂದು ಷರತ್ತುಗಳನ್ನೂ ವಿಧಿಸಲಾಗಿತ್ತು. ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡಂತೆ ಮಾಡಿದ್ದ ಇವರು, ಉದ್ದೇಶಪೂರ್ವಕವಾಗಿ ಹಿಂಸಾಚಾರಕ್ಕೆ ಇಳಿದಿದ್ದಾರೆ. ಕಂಡಕಂಡಲ್ಲಿ ಪೊಲೀಸರ ಮೇಲೂ ಹಲ್ಲೆ ಮಾಡಿದ್ದಾರೆ.
ಕೆಂಪು ಕೋಟೆಯಲ್ಲಿ ಸಂಘದ ಧ್ವಜವನ್ನು ಹಾರಿಸಿದ್ದಾರೆ. ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಓರ್ವ ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ.ದೆಹಲಿ ಪೊಲೀಸರ ಜೊತೆಗೆ ಹಲವು ಸುತ್ತಿನ ಮಾತುಕತೆಯ ಬಳಿಕ ಟ್ರ್ಯಾಕ್ಟರ್ ಪೆರೇಡ್ ಗೆ ಸಂಯುಕ್ತ ಕಿಸಾನ್ ಮೋರ್ಚಾ ಆಹ್ವಾನ ನೀಡಿದ್ದವು.
PublicNext
27/01/2021 08:56 am