ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯ ಬಿದಿರುತಳದ ಸಮೀಪ ಸ್ವಿಪ್ಟ್ ಡಿಸೈರ್ ಕಾರೊಂದು ಶನಿವಾರ ಮುಂಜಾನೆ 3ರ ವೇಳೆ ಪ್ರಪಾತಕ್ಕೆ ಉರುಳಿ ಐವರಿಗೆ ಗಂಭೀರ ಗಾಯವಾಗಿದೆ.
ತರೀಕೆರೆಯಿಂದ ಧರ್ಮಸ್ಥಳಕ್ಕೆ ಸಾಗುತ್ತಿದ್ದ ಕಾರು ಬಿದಿರುತಳ ಎಂಬಲ್ಲಿ ರಸ್ತೆಯಲ್ಲಿ ಮಂಜು ಮುಸುಕಿದ್ದರಿಂದ ದಾರಿ ಕಾಣದೆ ಚಾಲಕನ ನಿಯಂತ್ರಣ ತಪ್ಪಿ 150 ಅಡಿ ಆಳಕ್ಕೆ ಉರುಳಿದೆ. ಅದೇ ದಾರಿಯ ಪ್ರಯಾಣಿಕರಿಂದ ಮಾಹಿತಿ ಪಡೆದ ಸ್ಥಳೀಯ ಸಮಾಜ ಸೇವಕ ಮಹಮ್ಮದ್ ಆರೀಫ್, ಚೆಕ್ಕ್ ಪೋಸ್ಟ್ ಅರಣ್ಯ ಸಿಬ್ಬಂದಿ ಬಸವರಾಜ್ ಬಗಲಿ, ಪೊಲೀಸ್ ಸಿಬ್ಬಂದಿ ಸಚಿನ್ ಅವರ ತಂಡ ಸ್ಥಳಕ್ಕೆ ಧಾವಿಸಿ ಕಾರಿನಲ್ಲಿದ್ದ ತರೀಕೆರೆ ಮೂಲದ ರಾಕೇಶ್, ಸಂತೋಷ್, ಶಿವು, ಅಭಿಜಿತ್, ಹಾಲೇಶ್ ಅವರನ್ನು ಹೊರ ತೆಗೆದು ರಕ್ಷಿಸಿದ್ದಾರೆ.
ಹಾಲೇಶ್ ಅವರ ಕಾಲು ಮುರಿತಕ್ಕೊಳಗಾಗಿದ್ದು, ಉಳಿದವರಿಗೂ ತೀವ್ರ ಗಾಯಗಳಾಗಿದ್ದು, ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ. ಸ್ಥಳಕ್ಕೆ ಬಣಕಲ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಶ್ರೀನಾಥ್ ರೆಡ್ಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.
PublicNext
05/12/2020 04:38 pm