ಬೆಂಗಳೂರು: ಸೇನಾಧಿಕಾರಿಯ ಹೆಸರಿನಲ್ಲಿ ಆನ್‌ಲೈನ್ ವಂಚನೆ ನಡೆಸುತ್ತಿದ್ದ ನಾಲ್ವರು ಖದೀಮರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳೆಲ್ಲರೂ ರಾಜಸ್ತಾನ ಮೂಲದವರು. ಸೇನಾಧಿಕಾರಿ ಹೆಸರಿನಲ್ಲಿ ಒಎಲ್ ಎಕ್ಸ್ ಜಾಲತಾಣವನ್ನು ಬಳಸಿಕೊಂಡು ಕಾರು ಮಾರಾಟದ ಹೆಸರಿನಲ್ಲಿ ಮೋಸ ಮಾಡುತ್ತಿದ್ದರು.
ಒಎಲ್‌ಎಕ್ಸ್ ನಲ್ಲಿ ಕಾರು ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿ ಜನರಿಂದ ಹಣ ವಸೂಲಿ ಮಾಡುತ್ತಿದ್ದರು. ಸೇನಾಧಿಕಾರಿಯ ಹೆಸರಿನಲ್ಲಿ ಕಾರು ಮಾರಾಟದ ಜಾಹೀರಾತು ನೀಡುತ್ತಿರುವುದರಿಂದ ಜನರು ನಂಬಿ ಮೋಸ ಹೋಗುತ್ತಿದ್ದರು. ರಾಜಸ್ಥಾನದಿಂದಲೇ ಈ ನಾಲ್ವರು ಖದೀಮರು ಕಾರ್ಯಾಚರಣೆ ನಡೆಸಿ ರಾಜ್ಯದಲ್ಲಿ ಸುಮಾರು 20 ಮಂದಿಗೆ ಮೋಸ ಮಾಡಿದ್ದಾರೆ. ಈ ಕುರಿತಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಸಿಸಿಬಿ ಸೈಬರ್ ಘಟಕ ನಿಗಾ ಇಟ್ಟಿತ್ತು. ಖದೀಮರ ಕುರಿತಾಗಿ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ನಾಲ್ವರನ್ನು ಬಂಧಿಸಿದ್ದಾರೆ.
ಈ ಕುರಿತಾಗಿ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಕಾರಿನ ಫೋಟೋವನ್ನು ಒಎಲ್‌ಎಕ್ಸ್ ವೆಬ್‌ಸೈಟ್‌ನಲ್ಲಿ ಹಾಕಿ ಗ್ರಾಹಕರ ಜೊತೆಗೆ ಮಾತುಕತೆ ನಡೆಸಿ ಆರಂಭದಲ್ಲೇ ಹಣ ಪೀಕುತ್ತಿದ್ದರು. ಇವರನ್ನು ಸೇನಾಧಿಕಾರಿ ಎಂದು ನಂಬಿದ ಗ್ರಾಹಕರು ಪೂರ್ವಾಪರ ನೋಡದೇ ಹಣ ನೀಡುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಲಕ್ಷಾಂತರ ರೂಪಾಯಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
PublicNext
04/11/2020 11:36 am