ವಿಜಯವಾಡ: ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದ ಇಂಜಿನಿಯರ್ ವಿದ್ಯಾರ್ಥಿನಿ ದಿವ್ಯಾ ತೇಜಸ್ವಿನಿ ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ದಿವ್ಯಾಳ ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ ಸಂದೇಶಗಳನ್ನು ಮರಳಿ ಪಡೆಯುವ ಪ್ರಯತ್ನವನ್ನು ಪೊಲೀಸರು ಮಾಡಿದ್ದಾರೆ. ಇದರಲ್ಲಿ ತಿಳಿದುಬಂದಿರುವಂತೆ ದಿವ್ಯಾ ಮಾರ್ಚ್ 28ರಂದು ನಾಗೇಂದ್ರನಿಗೆ ಕರೆ ಮಾಡಿದ್ದಾಳೆ. ಅದಾದ ಬಳಿಕ ಏಪ್ರಿಲ್ 2ರಂದು ನಾಗೇಂದ್ರ ದಿವ್ಯಾಳಿಗೆ ಕರೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಮೊದಲ ಕರೆ ಸಂಭಾಷಣೆಯಲ್ಲಿ ನಾಗೇಂದ್ರ, 'ರಹಸ್ಯ ಮದುವೆಯನ್ನು ಹೆಚ್ಚು ದಿನ ಮುಚ್ಚಿಡಲಾಗುವುದಿಲ್ಲ. ನಾನು ತುಂಬಾ ಒತ್ತಡದಲ್ಲಿದ್ದೇನೆ ಎಂದು ಹೇಳಿದ್ದ. ಜೊತೆಗೆ ಆತ ತುಂಬಾ ಕೋಪದಲ್ಲಿರುವುದು ಕಂಡುಬಂದಿದೆ. ಆದರೆ ದಿವ್ಯಾಳನ್ನು ಯಾಕೆ ಕೊಲೆ ಮಾಡಿದ ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ದಿವ್ಯಾ ಹಾಗೂ ನಾಗೇಂದ್ರ ಕೊರೊನಾ ಲಾಕ್ಡೌನ್ ಹೇರುವವರೆಗೂ ಸಂಪರ್ಕದಲ್ಲಿದ್ದರು. ಆ ಬಳಿಕ ನಾಗೇಂದ್ರ ಸೈಕೋ ರೀತಿ ಆಡುವುದನ್ನು ನೋಡಿ ಅವನ ನಂಬರ್ ಅನ್ನು ದಿವ್ಯಾ ಬ್ಲಾಕ್ ಮಾಡಿದ್ದಳು ಎಂಬುದು ಆಕೆಯ ಫೋನ್ನಲ್ಲಿ ಸಿಕ್ಕ ಮಾಹಿತಿಗಳಿಂದ ಬಹಿರಂಗವಾಗಿದೆ.
ಏನಿದು ಪ್ರಕರಣ?: ವಿಜಯವಾಡದ ಕ್ರಿಸ್ತುರಾಜ್ಪುರಂನಲ್ಲಿನ ದಿವ್ಯಾ ಮನೆಗೆ ಅಕ್ಟೋಬರ್ 15ರಂದು ನುಗ್ಗಿದ್ದ ನಾಗೇಂದ್ರ ಚಾಕುವಿನಿಂದ ಇರಿದು ಗೆಳತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಪ್ರಕರಣದಲ್ಲಿ ಅನೇಕ ತಿರುವುಗಳಿದ್ದು, ಹೆಚ್ಚಿನ ತನಿಖೆಗೆ ವಿಜಯವಾಡ ಪೊಲೀಸ್ ಠಾಣೆಯಿಂದ ದಿಶಾ ಠಾಣೆಗೆ ವರ್ಗಾಯಿಸಲಾಗಿದೆ. ಇಬ್ಬರು ರಹಸ್ಯವಾಗಿ ವಿವಾಹವಾಗಿದ್ದರು ಎಂಬ ಫೋಟೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
PublicNext
20/10/2020 06:14 pm