ಬೆಂಗಳೂರು: ಡಾಕ್ಟರ್ ಪುನೀತ್ ರಾಜ್‌ಕುಮಾರ್, ಕರುನಾಡ ರತ್ನ, ಕರುನಾಡ ಕಣ್ಮಣಿ ನಮ್ಮೆಲ್ಲರನ್ನು ಅಗಲಿ ತಿಂಗಳುಗಳೇ ಕಳೆದಿವೆ. ಆದರೆ ಪುನೀತ್ ನೆನಪು ಮಾತ್ರ ಕರುನಾಡ ಜನರಿಂದ ಮತ್ತು ಅವರ ಅಭಿಮಾನಿಗಳಿಂದ ಮರೆಯಾಗುತ್ತಿಲ್ಲ. ಯಾಕೆಂದರೆ ಪುನೀತ್ ರಾಜ್‌ಕುಮಾರ್ ಅವರು ಮಾಡಿರುವಂತಹ ಸೇವೆ ಮತ್ತು ಸಮಾಜಮುಖಿ ಕಾರ್ಯಗಳು ಅಷ್ಟರ ಮಟ್ಟಿಗೆ ಇವೆ. ಇದನ್ನು ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ಭಾರತವೇ ಪುನೀತ್ ಅವರ ಸೇವೆಯನ್ನು ಕೊಂಡಾಡುತ್ತಿದೆ.
ಇದೀಗ ಕರ್ನಾಟಕದ ನೆರೆ ರಾಜ್ಯವಾದ ತಮಿಳುನಾಡಿನ ಚೆನ್ನೈನಲ್ಲಿ ನಡೆದ ಖಾಸಗಿ ವಾಹಿನಿಯ ಜನಪ್ರಿಯ ಗಲಾಟ ಅವಾರ್ಡ್ಸ್ 2022 ಸಮಾರಂಭದಲ್ಲಿ ಅಪ್ಪು ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಲಾಗಿದೆ. ಈ ಸಮಾರಂಭದ ಮುಖ್ಯ ಆಕರ್ಷಣೆಯಾಗಿ ಈ ಬಾರಿಯ ವಿಶೇಷ ಪ್ರಶಸ್ತಿಯನ್ನು ದಿವಂಗತ ಡಾಕ್ಟರ್ ಪುನೀತ್ ರಾಜ್‌ಕುಮಾರ್ ಅವರಿಗೆ ನೀಡಲಾಯಿತು. ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಖುದ್ದು ವೇದಿಕೆಗೆ ಹೋಗಿ ತಮಿಳಿನ ಖ್ಯಾತ ನಟ ಆರ್ಯ ಅವರಿಂದ ಈ ವಿಶೇಷ ಪ್ರಶಸ್ತಿಯನ್ನು ಸ್ವೀಕರಿಸಿದರು. ಹೀಗಾಗಿ ಕರ್ನಾಟಕ ರತ್ನ ಪುನೀತ್ ಬರೀ ಕರ್ನಾಟಕದ ಆಸ್ತಿ ಅಲ್ಲದೆ ಇಡೀ ಭಾರತವೇ ಗೌರವಿಸುವ ವ್ಯಕ್ತಿ ಆಗಿ ನಮ್ಮ ನಡುವೆ ಅಮರರಾಗಿದ್ದರೆ.
ಇನ್ನು, ಕಾರ್ಯಕ್ರಮದ ನಿರೂಪಕರು ಪುನೀತ್ ರಾಜ್‌ಕುಮಾರ್ ಅವರ ಹೆಸರು ಹೇಳುತ್ತಿದ್ದಂತೆ ಅಲ್ಲಿ ಸೇರಿದ್ದ ಸಾವಿರಾರು ಪ್ರೇಕ್ಷಕರು ಕೆಲ ಕಾಲ ಎದ್ದು ನಿಂತು ಕರುನಾಡ ರತ್ನನಿಗೆ ನಮನ ಸಲ್ಲಿಸಿದ್ದು ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಯಿತು. ಅಷ್ಟೇ ಅಲ್ಲದೇ ಈ ವೇದಿಕೆ ಎರಡು ರಾಜ್ಯಗಳ ನಡುವಿನ ಬಾಂಧವ್ಯವನ್ನು ಇನ್ನೂ ಗಟ್ಟಿ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ.
-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
17/05/2022 10:40 pm