ಬೆಂಗಳೂರು: ವಿಲನ್‌ಗೂ ಸೈ, ಕಾಮೆಡಿಯನ್‌ಗೂ ಸೈ, ಇನ್ನೊಂದೆಡೆ ಪೋಷಕ ಪಾತ್ರಗಳಿಗೂ ಎತ್ತಿದ ಕೈ ಎಂಬಂತಿದ್ದ ಹಿರಿಯ ನಟ ಸತ್ಯಜಿತ್ ನಿಧನರಾಗಿದ್ದಾರೆ. ಅವರು ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ವಯೋಸಹಜ ಖಾಯಿಲೆಯಿಂದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 2 ಗಂಟೆ ಸುಮಾರಿಗೆ ಸತ್ಯಜಿತ್ ಕೊನೆಯುಸಿರೆಳೆದಿದ್ದಾರೆ. ಹೆಗಡೆ ನಗರದ ಶಬರಿ ನಗರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 1.30ರ ನಂತರ ಸತ್ಯಜಿತ್ ಅಂತ್ಯಕ್ರಿಯೆ ನಡೆಯಲಿದೆ.
ಸೈಯ್ಯದ್ ನಿಜಾಮುದ್ದೀನ್ ಚಿತ್ರರಂಗದಲ್ಲಿ ಸತ್ಯಜಿತ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. 1986ರಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ತಮ್ಮ ವಿಶಿಷ್ಟ ಧ್ವನಿ ಹಾಗೂ ದೇಹ ಭಾಷೆಯ ನಟನೆ ಮೂಲಕ ಸತ್ಯಜಿತ್ ಕನ್ನಡಿಗರ ಮನೆ ಮಾತಾಗಿದ್ದರು.
PublicNext
10/10/2021 07:57 am