ವಿಜಯ್ ಪ್ರಸಾದ್ ನಿರ್ದೇಶನ ಮಾಡಿರುವ ಪೆಟ್ರೋಮ್ಯಾಕ್ಸ್ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡಿದೆ. ಬಹುತೇಕ ಸಿನಿಮಾವನ್ನು ಮೈಸೂರಿನಲ್ಲಿ ಶೂಟಿಂಗ್ ಮಾಡಿಕೊಂಡಿರುವ ತಂಡ, ಇದೀಗ ಕುಂಬಳಕಾಯಿಯನ್ನೂ ಅರಮನೆ ನಗರಿಯಲ್ಲಿಯೇ ಒಡೆದು, ಹೊಸ ವರ್ಷದ ಮೊದಲ ದಿನವೇ ಬಿಡುಗಡೆಯತ್ತ ಚಿತ್ತ ನೆಟ್ಟಿದೆ ಇಡೀ ತಂಡ.
ಈ ಶೂಟಿಂಗ್ ಪಯಣವನ್ನು ಮೆಲುಕು ಹಾಕುವ ಉದ್ದೇಶಕ್ಕೆ ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು.
ತಂಡದವರು ಒಬ್ಬೊಬ್ಬರೆ ಶೂಟಿಂಗ್ ನೆನಪುಗಳನ್ನು ಬಿಚ್ಚಿಟ್ಟರು ಮೊದಲಿಗೆ ಮಾತು ಆರಂಭಿಸಿದ ಚಿತ್ರದ ನಿರ್ದೇಶಕ ವಿಜಯ್ ಪ್ರಸಾದ್, ಈ ಸಿನಿಮಾದಲ್ಲಿ ಚೇಷ್ಠೆಯೇ ಮುಖ್ಯ ಕಥಾಹಂದರ.
ಆ ಹಿನ್ನೆಲೆಯನ್ನಿಟ್ಟುಕೊಂಡೇ ಈ ಸಿನಿಮಾ ನೋಡಿಸಿಕೊಂಡು ಹೋಗಲಿದೆ ಎನ್ನುತ್ತಿದ್ದಂತೆ, ಅದನ್ನೇ ಮರು ಉತ್ತರ ನೀಡಿದರು ನಟಿ ಹರಿಪ್ರಿಯಾ, ಅದಕ್ಕೆ ಸತೀಶ್ ನೀನಾಸಂ ಮತ್ತು ಕಾರುಣ್ಯ ರಾಮ್ ಸಹ ಸೈ ಎಂದರು. ಹೀಗೆ ಸುದ್ದಿಗೋಷ್ಠಿ ಮಜವಾಗಿಯೇ ಸಾಗಿತು.
‘ನನ್ನ ಸಿನಿಮಾ ನೋಡಿದ ಪ್ರತಿಯೊಬ್ಬರು ಪ್ರತಿ ಬಾರಿ ‘ಡಬಲ್ ಮೀನಿಂಗ್’ ಎಂದು ಕರೆಯುತ್ತಾರೆ. ನಾನು ಅದನ್ನು ಚೇಷ್ಟೇಗೆ ಹೋಲಿಸುತ್ತೇನೆ.
ಮನರಂಜನೆ ಸಲುವಾಗಿ ಚೇಷ್ಟೆಯನ್ನು ಅಳವಡಿಸಿರುತ್ತೇನೆ. ಆದರೆ, ಇಡೀ ಸಿನಿಮಾ ಡಬಲ್ ಮೀನಿಂಗ್ ಇದ್ದಿದ್ದರೆ ಈ ಹಿಂದಿನ ನೀರ್ದೋಸೆ ಸಿನಿಮಾ ಫ್ಲಾಪ್ ಆಗಿರಬೇಕಿತ್ತು.
ಗಾಢವಾದ ಕತೆಯ ಮೂಲಕ ಭಾವುಕ ಪಯಣವನ್ನು ಸೇರಿಸಿ ಗೆಲುವು ಕಂಡೆವೆ ಎಂದು ನಿರ್ದೇಶಕ ವಿಜಯ್ ಪ್ರಸಾದ್ ತಿಳಿಸಿದರು.
ಡಬಲ್ ಮೀನಿಂಗ್ ಎಂದಾಕ್ಷಣ ಚಿತ್ರವನ್ನು ಬೇರೆ ರೀತಿಯಲ್ಲಿ ನೋಡುವುದು ತಪ್ಪು. ಇಲ್ಲಿ ಸಾಮಾನ್ಯರ ಬದುಕಿನಲ್ಲಿ ನಡೆಯುವ ಕಥೆಯನ್ನು ತೋರಿಸಲಿದ್ದೇವೆ.
ಇದು ಚಿತ್ರದ ಮಹತ್ವದ ಘಟ್ಟ ಎನ್ನುವ ನಟ ಸತೀಶ್ ನೀನಾಸಂ, ಕಳೆ ಮೂರು ವರ್ಷದ ಹಿಂದೆಯೇ ಈ ಸಿನಿಮಾ ಶುರು ಅಗಬೇಕಿತ್ತು. ಕಾರಣಾಂತರಗಳಿಂದ ಆಗಲಿಲ್ಲ.
ಆ ಬಗ್ಗೆ ನಿರ್ದೇಶಕರಿಗೆ ನಾನು ಕೇಳುತ್ತಲೇ ಬಂದೆ. ಕೊರೊನಾ ಸಮಯದಲ್ಲಿ ಚಿತ್ರ ಮಾಡುವ ಮನಸ್ಸಾಯ್ತು. ಇದೀಗ ಶೂಟಿಂಗ್ ಸಹ ಮುಗಿಸಿದ್ದೇವೆ ಎಂದರು ಸತೀಶ್ ನಾಯಕ ನಟರಾಗಿ ಸತೀಶ್ ನೀನಾಸಂ, ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದು, ಪ್ರಮುಖ ಪಾತ್ರದಲ್ಲಿ ಕಾರುಣ್ಯ ರಾಮ್ ಕಾಣಿಸಿಕೊಂಡಿದ್ದಾರೆ.
ವಿಶೇಷ ಪಾತ್ರದಲ್ಲಿ ವಿಜಯಲಕ್ಷ್ಮೀ ಸಿಂಗ್ ನಟಿಸಿದ್ದಾರೆ. ನೀರ್ ದೋಸೆ ಸಿನಿಮಾವನ್ನು ಇಷ್ಟಪಟ್ಟ ಜನರು ಈ ಸಿನಿಮಾವನ್ನು ಸಹ ಇಷ್ಟಪಡುವ ವಿಶ್ವಾಸ ಇದೆ.
ನೀರ್ ದೋಸೆ ರೀತಿಯಲ್ಲಿಯೇ ಈ ಸಿನಿಮಾದಲ್ಲೂ ಸಾಕಷ್ಟು ಚೇಷ್ಟೆ, ಎಮೋಷನಲ್ ಕಾಣಬಹುದು. ಹೀಗಾಗಿ ಈ ಸಿನಿಮಾ ಯುವ ಸಮುದಾಯ, ಕುಟುಂಬ ವರ್ಗದವರನ್ನು ಸಹ ಸೆಳೆಯುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದ ನಾಯಕಿ ಹರಿಪ್ರಿಯಾ ಮಾತನಾಡಿ, ಇದೊಂದು ಪ್ರಯೋಗಾತ್ಮಕ ಸಿನಿಮಾ. ನನ್ನ ಸಿನಿಮಾ ಕರಿಯರ್ನಲ್ಲಿಯೇ ವಿಭಿನ್ನವಾದ ಪಾತ್ರವನ್ನು ಈ ಚಿತ್ರದಲ್ಲಿ ನಿಭಾಯಿಸಿದ್ದೇನೆ.
ಚೇಷ್ಟೆ ಜತೆಗೆ ಅರ್ಥಪೂರ್ಣವಾದ ಕಥೆಯೂ ಈ ಸಿನಿಮಾದಲ್ಲಿದೆ. ಯುವ ಪೀಳಿಗೆ ಮತ್ತು ಕೌಟುಂಬಿಕ ಕಥೆಯೂ ಚಿತ್ರದ ಪ್ರಮುಖ ಎಳೆ ಎಂದರು.
ಯಾವುದೇ ಪಾತ್ರ ಕೊಟ್ಟರೂ ಮಾಡಲು ಸಿದ್ಧ ಎಂದಿದ್ದ ಕಾರುಣ್ಯಾ ರಾಮ್ ಅಷ್ಟೇ ವಿಶೇಷವಾದ ಪಾತ್ರವನ್ನೇ ಮಾಡಿದ್ದಾರೆ. ಈ ಸಿನಿಮಾದಲ್ಲಿನ ನನ್ನ ಪಾತ್ರ ತುಂಬ ವಿಭಿನ್ನ.
ತುಂಬ ಇಷ್ಟಪಟ್ಟು ಒಪ್ಪಕೊಂಡ ಸಿನಿಮಾ ಇದು. ಮೊದಲಿಗೆ ಕಥೆ ಹೇಳುವುದೇ ಬೇಡ. ನಿಮ್ಮ ಸಿನಿಮಾದಲ್ಲಿ ಅವಕಾಶ ನೀಡಿ ಎಂದಿದ್ದೇ ಅಷ್ಟೇ.
ಅದರಂತೆ ನನ್ನ ಕರಿಯರ್ನಲ್ಲಿ ಈ ಪಾತ್ರ ಒಳ್ಳೊಳ್ಳೆ ಅವಕಾಶಗಳನ್ನು ನೀಡಲಿದೆ ಎಂದರು.
ನೀನಾಸಂ ಸತೀಶ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಹರಿಪ್ರಿಯಾ, ಕಾರುಣ್ಯಾರಾಮ್ ನಾಯಕಿಯರ ಜತೆಗೆ ಗೊಂಬೆಗಳ ಲವ್ ಸಿನಿಮಾ ಖ್ಯಾತಿಯ ನಟ ಅರುಣ್, ನಾಗಭೂಷಣ್, ಭುವಿ ಸಹ ಸಿನಿಮಾದ ಆಧಾರ ಸ್ತಂಭಗಳು. ಅವರೂ ಸಹ ಶೂಟಿಂಗ್ ಅನುಭವಗಳನ್ನು ಹಂಚಿಕೊಂಡರು.
ಒಟ್ಟು 36 ದಿನಗಳ ಚಿತ್ರೀಕರಣ ಮಾಡಿಕೊಂಡಿರುವ ತಂಡ, ಮೈಸೂರಿನಲ್ಲಿಯೇ ಶೂಟಿಂಗ್ ಶುರುಮಾಡಿ, ಅಲ್ಲಿಯೇ ಮುಗಿಸಿಕೊಂಡಿದೆ.
ವಿಶೇಷ ಏನೆಂದರೆ ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜತಗೆ ಸತೀಶ್ ಪಿಕ್ಚರ್ ಹೌಸ್ ಅಡಿ ಬಂಡವಾಳವನ್ನೂ ಹೂಡಿದ್ದಾರೆ ಸತೀಶ್ ನೀನಾಸಂ.
ಸ್ಟುಡಿಯೋ 18 ಮತ್ತು ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಸಹ ನಿರ್ಮಾಣದಲ್ಲಿ ಸಾಥ್ ನೀಡಿದೆ. ಕತೆ, ಚಿತ್ರಕತೆ, ಸಂಗೀತ ನಿರ್ದೇಶನ ಅನೂಪ್ ಸೀಳಿನ್, ಕ್ಯಾಮರಾ ನಿರಂಜನ್‌ಬಾಬು, ಸಂಕಲನ ಸುರೇಶ್ ಅರಸ್, ಹೊಸ್ಮನೆ ಮೂರ್ತಿ ಕಲೆ, ವಿನಯ್ ಸಹ ನಿರ್ದೇಶನ ಚಿತ್ರಕ್ಕಿದೆ.
PublicNext
04/01/2021 10:59 am