ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೈಜ ಘಟನೆ ಹೇಳುತ್ತ ಕಣ್ಣೀರಿಟ್ಟ ನಟ ಜಗ್ಗೇಶ್

ಬೆಂಗಳೂರು: ಹಿರಿಯ ನಟ ಜಗ್ಗೇಶ್ ಅವರು ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಗಳ ಭಕ್ತರೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕೆಲವು ದಿನಗಳಿಂದ ಅವರು ಸಾಮಾಜಿಕ ಜಾಲತಾಣಗಳಲ್ಲಿ ರಾಯರ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದಕ್ಕೆ ನಿಖರ ಕಾರಣ ಏನೆಂಬುದು ಈಗ ಗೊತ್ತಾಗಿದೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬೆರೆದುಕೊಂಡಿರುವ ಅವರು ಕಣ್ಣೀರಿಟ್ಟಿದ್ದಾರೆ.

ನಟ ಜಗ್ಗೇಶ್ ಬರೆದಿದ್ದು ಹೀಗಿದೆ- ಪರಿಮಳ (ಜಗ್ಗೇಶ್ ಪತ್ನಿ) 9 ಗಂಟೆಗೆ ನನ್ನ ಏಕಾಂತ ಜಾಗದಲ್ಲಿ ಊಟ ಬಡಿಸಿ ಆನ್‍ಲೈನ್ ಕೆಲಸಕ್ಕೆ ತನ್ನ ಹಾಲಿಗೆ ಹೋದಳು. ನಾನು ಊಟ ಮುಗಿಸಿ ಒಂದು ಬಾರಿ ಸ್ಮರಣೆ ಸಾಲದೆ ಹಾಡು ಕೇಳುತ್ತಾ ರಾಯರ ಚಿತ್ರಪಟ ನೋಡುತ್ತ ಮಂತ್ರಮುಗ್ಧನಾಗಿ ಧ್ಯಾನದಲ್ಲಿ ಕೂತುಬಿಟ್ಟೆ. ಆಗ ನನ್ನ ಮನಸ್ಸಿನಲ್ಲಿ ರಾಯರ ಜೊತೆ ಸಂಭಾಷಣೆ ಶುರುವಾಯಿತು.

ರಾಯರೆ ನಾನು ಬದುಕಲ್ಲಿ ಕೇಳಿದ್ದೆಲ್ಲಾ ಕೊಟ್ಟಿದ್ದೀರಿ, ಕೊಡುತ್ತಿದ್ದೀರಿ. ನಿಮ್ಮ ಭಿಕ್ಷೆಯಿಂದ ನಾನು ಕೋಟ್ಯಂತರ ಪ್ರೀತಿಸುವ ಜನರನ್ನು ಯೋಗ ಪಡೆದಿರುವೆ. ಆದರೆ ಪಾಪಿಯಾದ ನಾನು ನಿಮ್ಮ ಶಾಸ್ತ್ರೋಕ್ತವಾಗಿ ಭಜಿಸುವ ವಿದ್ಯೆ ಪಡೆಯಲಿಲ್ಲ. ಕಲಿಯುವ ವಯಸ್ಸಲ್ಲಿ ಅಪ್ಪ ಬಿಡಲಿಲ್ಲ. ಅಲ್ಪಸ್ವಲ್ಪ ಚಿತ್ರ ಗೀತೆ ಹಾಡುವೆ. ದಯಮಾಡಿ ನಿಮ್ಮ ಮುಂದೆ ಕೂತು ಹಾಡಲು ಆಶೀರ್ವದಿಸಿ. ಮನತುಂಬಿ ಹಾಡುವಾಸೆ ದಯಮಾಡಿ ಕರುಣಿಸಿ ಎಂದು ಪ್ರಾರ್ಥಿಸುತ್ತಿದ್ದೆ.

ಸ್ನೇಹಿತರೆ ಮಿಂಚಿನಂತೆ ಮಂತ್ರಾಲಯ ಆತ್ಮೀಯ ಸಹೋದರ ಮಠದ ಪಿಆರ್‍ಓ ನರಸಿಂಹಾಚಾರ್ ಅವರ ಮೊಬೈಲ್ ನಿಂದ ವಾಟ್ಸಾಪ್ ವೀಡಿಯೋ ಕಾಲ್ ಬಂತು. ಕರೆ ಸ್ವೀಕರಿಸಿದಾಗ ಬೃಂದಾವನ ದರ್ಶನ ಆಯಿತು. ಅಳು ತಡೆಯಲಾಗಲಿಲ್ಲ. ಮನ ಬಿಚ್ಚಿ ರಾಯರಿಗೆ ಹೇಳಿದೆ. ನನ್ನ ಮಾತು ಬೃಂದಾವನಕ್ಕೆ ಕೇಳುವ ಸೌಭಾಗ್ಯ ನನಗೆ ನೀಡಿದ ನಿಮ್ಮ ಕರುಣೆ ಸಾಕು. ಈ ಜನ್ಮಕ್ಕೆ ಇನ್ನೆಂದಿಗೂ ನನಗೆ ಮನುಜನ್ಮ ಬೇಡ. ನಿಮ್ಮ ಪಾದದಡಿಯ ಧೂಳಾಗಿ ಜನ್ಮಕೊಡಿ ಸಾಕು ಎಂದು ಪ್ರಾರ್ಥಿಸಿದೆ. ಈ ಸರಿಹೊತ್ತಲ್ಲಿ ರಾಯರ ಬೃಂದಾವನ ದರ್ಶನ ನನಗೆ ಮಾಡಿಸಲು ಏನು ಪ್ರೇರಣೆ ಆಯಿತು ಎಂದು ನರಸಿಂಹಾಜಾರ್ ಅವರನ್ನು ಕೇಳಿದೆ. ಅದಕ್ಕೆ ಅವರು ಬೃಂದಾವನ ಅಲಂಕಾರ ತೆಗೆಯಬೇಕಾದರೆ ಅಲ್ಲೆ ನಿಂತಿದ್ದೆ. ಇದ್ದಕ್ಕಿದ್ದಂತೆ ಜಗ್ಗೇಶನಿಗೆ ಬೃಂದಾವನ ತೋರಿಸುವಂತೆ ರಾಯರ ಪ್ರೇರಣೆ ಆಯಿತು ಎಂದರು.

ಈ ಬರವಣಿಗೆಯಲ್ಲೂ ಕಣ್ಣೀರು ನಿಂತಿಲ್ಲ. ಜನ್ಮಪಾವನ ಹಾಗೂ ರಾಯರ ಪರಿಚಯಿಸಿ ಕಣ್ಣಿಗೆ ಕಾಣದ ಊರಿಗೆ ಹೋದ ನನ್ನ ದೇವತೆ ಅಮ್ಮನಿಗೆ ಉಸಿರು ನಿಲ್ಲುವವರೆಗೆ ಧನ್ಯವಾದ. ಮಾತೃದೇವೋಭವ ಗುರುದೇವೊಭವ. ಕೋಟಿ ಬಾರಿ ಪ್ರಮಾಣಿಸಿ ಹೇಳುವೆ ರಾಯರು ತಾಯಂತೆ ಮಕ್ಕಳು ಬಯಸಿದಾಗ ಬಂದು ಬಿಡುವರು. ಈ ಸಮಯ ಬದುಕಿನ ಆನಂದಮಯ..

ಹೀಗೆ ಬರೆಯುವ ಮೂಲಕ ನಟ ಜಗ್ಗೇಶ್ ನಡೆದ ಘಟನೆಯನ್ನು ಭಾವುಕರಾಗಿ ವಿವರಿಸಿದ್ದಾರೆ.

Edited By : Nagaraj Tulugeri
PublicNext

PublicNext

16/11/2020 03:37 pm

Cinque Terre

70.6 K

Cinque Terre

6