ಚಿತ್ರದುರ್ಗ: ಒಂದೆಡೆ ಭಕ್ತರು- ಪೊಲೀಸರ ನಡುವಿನ ಮಾತಿನ ಚಕಮಕಿ. ಮತ್ತೊಂದೆಡೆ ಶ್ರೀ ಮುರುಘಾ ಶಾಂತವೀರ ಶ್ರೀಗಳ ಭಾವಚಿತ್ರದೊಂದಿಗೆ ನಡೆದ ಪೀಠಾರೋಹಣ... ಇದು ಚಿತ್ರದುರ್ಗ ಮುರುಘಾ ಮಠದಲ್ಲಿ ನಡೆದ ಶೂನ್ಯ ಪೀಠಾರೋಹಣ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಾವಳಿ.
ಇಷ್ಟು ವರ್ಷ ಶ್ರೀ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರು ಕಾವಿ ತೊಟ್ಟು ರುದ್ರಾಕ್ಷಿ ಕಿರೀಟ ಧರಿಸಿ ಅದ್ಧೂರಿಯಾಗಿ ಪೀಠಾರೋಹಣ ಮಾಡುತ್ತಿದ್ದರು. ಆದರೆ, ಈ ಬಾರಿ ಅತ್ಯಾಚಾರ ಪ್ರಕರಣದ ಆರೋಪ ಹೊತ್ತು ಜೈಲು ಸೇರಿರುವುದರಿಂದ ಮಠದ ಭಕ್ತರು ಶ್ರೀ ಮಹಾಂತ ರುದ್ರ ಸ್ವಾಮೀಜಿ ನೇತೃತ್ವದಲ್ಲಿ ಸರಳವಾಗಿ ಶರಣ ಸಂಸ್ಕೃತಿ ಉತ್ಸವ ನೆರವೇರಿಸಿದ್ದು, ಕೊನೆ ದಿನವಾದ ಇಂದು ಶರಣರ ಅನುಪಸ್ಥಿತಿಯಲ್ಲಿ ಶ್ರೀ ಮಠದ ಮೂಲ ಗುರುಗಳ ಭಾವಚಿತ್ರ ಇಟ್ಟು ಶೂನ್ಯ ಪೀಠಾರೋಹಣ, ಮೆರವಣಿಗೆ ನೆರವೇರಿಸಿದ್ರು.
ಶಿವಮೂರ್ತಿ ಮುರುಘಾ ಶರಣರು ಜೈಲು ಸೇರಿದ ದಿನದಿಂದ ಕಳೆಗುಂದಿರುವ ಮಠದಲ್ಲಿ ಇಂದಿಗೂ ಕೂಡ ಆತಂಕ, ನೋವಿನ ಛಾಯೆ ಮನೆಮಾಡಿದ್ದು, ನೂರಾರು ಭಕ್ತರು ಮಠದಲ್ಲೇ ಬೀಡು ಬಿಟ್ಟಿರುವುದರಿಂದ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಈ ನಡುವೆ ಶ್ರೀಗಳ ಮೇಲಿನ ಆರೋಪಕ್ಕೆ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಷಡ್ಯಂತ್ರವೇ ಕಾರಣ ಎಂದು ಹಲವಾರು ಭಕ್ತರು ನಂಬಿರುವ ಕಾರಣ ಪೀಠಾರೋಹಣ ಕಾರ್ಯಕ್ರಮಕ್ಕೆ ಆಗಮಿಸಿದ ಬಸವರಾಜನ್ ದಂಪತಿಗೆ ಪೊಲೀಸರು ತಡೆಯುವ ಪ್ರಯತ್ನ ನಡೆಸಿದ್ರು.
ಇದು ಪರಸ್ಪರ ಮಾತಿನ ಚಕಮಕಿಗೂ ಕಾರಣವಾಗಿತ್ತು. ಆದರೆ, ವಿಶ್ರಾಂತ ನ್ಯಾಯಾಧೀಶರು ಮಠದ ಆಡಳಿತದ ಜವಾಬ್ದಾರಿ ಹೊತ್ತಿರುವ ವಸ್ತ್ರಮಠ ಅವರು ಪರಿಸ್ಥಿತಿ ಶಾಂತಗೊಳಿಸಿದ ಮೇಲೆ ಬಸವರಾಜನ್ ದಂಪತಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾದ್ರು.
ಒಟ್ಟಾರೆ ನಾಡಿನ ಪ್ರತಿಷ್ಠಿತ ರಾಜಾಶ್ರಯದ ಮಠಗಳಲ್ಲೊಂದಾದ ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿಯು ಅಪ್ರಾಪ್ತ ಮಕ್ಕಳ ಮೇಲಿನ ಅತ್ತಾಚಾರ ಆರೋಪದ ಕಳಂಕ ಹೊತ್ತು ಜೈಲಿನಲ್ಲಿದ್ದು, ಪ್ರತೀ ವರ್ಷ ಮೈಸೂರು ದಸರಾ ಉತ್ಸವಕ್ಕೆ ಪರ್ಯಾಯವಾಗಿ ನಡೆಯುತ್ತಿದ್ದ ಶರಣ ಸಂಸ್ಕೃತಿ ಉತ್ಸವ ಭಕ್ತರಿಗೆ ಬೇಸರ ತರಿಸುವಂತಾಗಿದ್ದು ಮಾತ್ರ ವಿಪರ್ಯಾಸ.
PublicNext
06/10/2022 09:54 pm