ಮುಂಬೈ: ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು 75 ಮೂಲ ಅಂಕ ಏರಿಕೆ ಮಾಡಿದ ಬೆನ್ನಲ್ಲೇ ಎಲ್ಲಾ ಪ್ರಮುಖ ಜಾಗತಿಕ ಸೂಚ್ಯಂಕಗಳು ಕುಸಿತ ಕಂಡಿವೆ. ದುರ್ಬಲ ಜಾಗತಿಕ ಸೂಚನೆಗಳಿಂದಾಗಿ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಮಾನದಂಡ ಸೂಚ್ಯಂಕಗಳು ಶೇ.1ಕ್ಕಿಂತ ಹೆಚ್ಚು ಕುಸಿದವು. ನಿಫ್ಟಿ 50 ಮತ್ತು ಸೆನ್ಸೆಕ್ಸ್ ಎರಡೂ ಆಯಾ ಮಟ್ಟಗಳಾದ 17,500 ಮತ್ತು 59,000ಕ್ಕಿಂತ ಕೆಳಗೆ ಇಳಿದವು.
ಬಹುಪಾಲು ವಲಯಗಳು ಕಡಿಮೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ಗರಿಷ್ಠ ನಷ್ಟ ಅನುಭವಿಸಿರುವ ಬಿಎಸ್‌ಇ ಫೈನಾನ್ಶಿಯಲ್ ಸರ್ವೀಸಸ್ ಮತ್ತು ಬಿಎಸ್‌ಇ ಬ್ಯಾಂಕೆಕ್ಸ್ ಎರಡೂ ಸುಮಾರು ಶೇ. 2ರಷ್ಟು ಕುಸಿದಿವೆ. ಅಚ್ಚರಿಯ ರೀತಿಯಲ್ಲಿ ಸಾಮಾನ್ಯವಾಗಿ ದುರ್ಬಲವಾಗಿರುವ ಮಾರುಕಟ್ಟೆಯಲ್ಲಿ ಬಿಎಸ್ಇ ಐಟಿ ಮತ್ತು ಬಿಎಸ್ಇ ಟೆಕ್ ಆರಂಭಿಕ ಅವಧಿಯಲ್ಲಿ ಭಾರೀ ಗಳಿಕೆ ದಾಖಲಿಸಿವೆ. ಶೇ.3ಕ್ಕಿಂತ ಹೆಚ್ಚಿನ ಲಾಭಗಳೊಂದಿಗೆ ನ್ಯೂಜೆನ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಬಿಎಸ್‌ಇ ಐಟಿಯನ್ನು ಲಾಭದಲ್ಲಿ ಮುನ್ನಡೆಸುತ್ತಿದೆ.
ಬೆಳಗ್ಗೆ 11:00 ಗಂಟೆಗೆ ಬಿಎಸ್‌ಇ ಸೆನ್ಸೆಕ್ಸ್ ಶೇ. 1.02ರಷ್ಟು ಕುಸಿದು 58,524 ಮಟ್ಟವನ್ನು ತಲುಪಿತ್ತು. ನಿಫ್ಟಿ 50 ಸೂಚ್ಯಂಕವು 17,452 ಮಟ್ಟಕ್ಕೆ ಇಳಿಕೆ ಕಂಡು ಶೇ. 1.01ರಷ್ಟು ನಷ್ಟ ದಾಖಲಿಸಿತ್ತು. ಸೆನ್ಸೆಕ್ಸ್‌ನಲ್ಲಿ ಟಾಟಾ ಸ್ಟೀಲ್, ಸನ್ ಫಾರ್ಮಾಸ್ಯುಟಿಕಲ್ಸ್ ಮತ್ತು ಇನ್ಫೋಸಿಸ್ ಗರಿಷ್ಠ ಗಳಿಕೆ ದಾಖಲಿಸಿದ್ದರೆ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಮಹೀಂದ್ರಾ ಆಂಡ್ ಮಹೀಂದ್ರಾ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಮಾರುಕಟ್ಟೆಯನ್ನು ಕೆಳಕ್ಕೆಳೆದಿವೆ.
ಬಿಎಸ್‌ಇ ಸ್ಮಾಲ್‌ಕ್ಯಾಪ್ ಪ್ಯಾಕ್‌ನಲ್ಲಿ ಗರಿಷ್ಠ ಗಳಿಕೆ ದಾಖಲಿಸಿರುವ ಷ್ನೇಯ್ಡರ್ ಎಲೆಕ್ಟ್ರಿಕ್ ಇನ್‌ಫ್ರಾಸ್ಟ್ರಕ್ಚರ್‌ನ ಷೇರುಗಳು ಶೇ.10ಕ್ಕಿಂತ ಹೆಚ್ಚು ಏರಿಕೆ ಕಂಡಿದ್ದು 52 ವಾರಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ಆಪ್ಕೋಟೆಕ್ಸ್ ಇಂಡಸ್ಟ್ರೀಸ್ ಮತ್ತು ಗಾಯತ್ರಿ ಪ್ರಾಜೆಕ್ಟ್‌ಗಳೆರಡೂ ಗಮನಾರ್ಹವಾದ ಖರೀದಿಯನ್ನು ಕಂಡಿದ್ದು, ಷೇರುಗಳು ಶೇ. 6ಕ್ಕಿಂತ ಹೆಚ್ಚು ಏರಿಕೆ ಕಂಡಿವೆ.
PublicNext
23/09/2022 08:09 pm