ಬೆಂಗಳೂರು: ಫೇರ್‌ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಬೆಂಗಳೂರು ವಿಮಾನ ನಿಲ್ದಾಣದ ನಿರ್ವಾಹಕ ಬಿಐಎಎಲ್‌ನಲ್ಲಿ ಹೆಚ್ಚುವರಿಯಾಗಿ ಶೇಕಡಾ 10 ರಷ್ಟು ಪಾಲನ್ನು ಖರೀದಿಸಲಿದ್ದು, ಅದರ ಒಟ್ಟಾರೆ ಷೇರುಗಳನ್ನು ಶೇಕಡಾ 74 ಕ್ಕೆ ಏರಿಸಲಿದೆ.
ಇಲ್ಲಿಯವರೆಗೂ ಬಿಐಎಎಲ್‌ನಲ್ಲಿ ಶೇಕಡಾ 64ರಷ್ಟು ಪಾಲು ಹೊಂದಿದ್ದ ಫೇರ್‌ಫ್ಯಾಕ್ಸ್ ಇಂಡಿಯಾವು ಸೀಮೆನ್ಸ್ ಪ್ರಾಜೆಕ್ಟ್ಸ್ ವೆಂಚರ್ಸ್‌ನಿಂದ ಶೇಕಡಾ 10 ರಷ್ಟು ಪಾಲನ್ನು ಪಡೆದುಕೊಳ್ಳುತ್ತಿದೆ. ಅದರೊಂದಿಗೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಫೇರ್‌ಫಾಕ್ಸ್ ಇಂಡಿಯಾದ ಪಾಲು ಶೇಕಡಾ 74 ಆಗಲಿದೆ. ಒಟ್ಟಾರೆ 2.55 ಬಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 2160 ಕೋಟಿ ರೂಪಾಯಿ ಮೌಲ್ಯದ ವ್ಯವಹಾರ ಇದಾಗಿದೆ. ಮುಂದಿನ ಮಾರ್ಚ್ ತ್ರೈಮಾಸಿಕದ ವೇಳೆ ಈ ವ್ಯವಹಾರ ಸಂಪೂರ್ಣವಾಗಿ ಮುಗಿಯಲಿದ್ದು, ಇದರೊಂದಿಗೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕೆನಡಾದ ಟೊರೊಂಟೂ ಮೂಲದ ಕಂಪನಿಯ ಹಿಡಿತ ಇನ್ನಷ್ಟು ಹಚ್ಚಾಗಲಿದೆ.
ಖರೀದಿಯ ಬೆಲೆಯನ್ನು ಆರಂಭಿಕ ಮೊತ್ತದೊಂದಿಗೆ ಮೂರು ಕಂತುಗಳಲ್ಲಿ ಪಾವತಿಸಲಾಗುತ್ತದೆ. ಕಂತುಗಳನ್ನು 2025ರ ಮೊದಲ ತ್ರೈಮಾಸಿಕದ ಅಂತಿಮ ದಿನಾಂಕದಂದು ಪಾವತಿಸಲಾಗುವುದು" ಎಂದು ಫೇರ್‌ಫ್ಯಾಕ್ಸ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ಎರಡನೇ ಮತ್ತು ಮೂರನೇ ಕಂತುಗಳನ್ನು ಕ್ರಮವಾಗಿ ಆಗಸ್ಟ್ 31, 2025 ಮತ್ತು ಜುಲೈ 31, 2026 ರಂದು ಅಥವಾ ಅದರ ಆಸುಪಾಸಿನಲ್ಲಿ ಪಾವತಿಸಬೇಕು.
ಫೇರ್‌ಫ್ಯಾಕ್ಸ್ ಇಂಡಿಯಾವು ಜರ್ಮನಿ ಮೂಲದ ಸೀಮೆನ್ಸ್ ಫೈನಾನ್ಶಿಯಲ್ ಸರ್ವೀಸಸ್‌ನ ಭಾಗವಾದ ಸೀಮೆನ್ಸ್ ಪ್ರಾಜೆಕ್ಟ್ ವೆಂಚರ್ಸ್ ಜಿಎಂಬಿಹೆಚ್‌ನಿಂದ ಹೆಚ್ಚುವರಿ ಇಕ್ವಿಟಿಯನ್ನು ಪಡೆದುಕೊಳ್ಳಲಿದೆ ಎಂದು ಕಂಪನಿಯು ಡಿಸೆಂಬರ್ 3 ರಂದು ತಿಳಿಸಿದೆ.
"ಬಿಐಎಎಲ್‌ನಲ್ಲಿನ ಈ ಹೆಚ್ಚುವರಿ ಹೂಡಿಕೆಯು ಅದರ ಮುಂದುವರಿದ ಬೆಳವಣಿಗೆಯಲ್ಲಿ ನಮ್ಮ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಮತ್ತು ವಿಮಾನ ನಿಲ್ದಾಣದ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಹರಿ ಮಾರಾರ್ ಮತ್ತು ಅವರ ನಿರ್ವಹಣಾ ತಂಡದ ಅತ್ಯುತ್ತಮ ದಾಖಲೆಯನ್ನು ಪ್ರತಿಬಿಂಬಿಸುತ್ತದೆ" ಎಂದು BIAL ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಉಲ್ಲೇಖಿಸಿ ಫೇರ್‌ಫ್ಯಾಕ್ಸ್ ಇಂಡಿಯಾ ಸಂಸ್ಥಾಪಕ ಕೆನಡಾದ ಕೋಟ್ಯಧಿಪತಿ ಪ್ರೇಮ್ ವಾತ್ಸಾ ತಿಳಿಸಿದ್ದಾರೆ.
ಫೇರ್‌ಫ್ಯಾಕ್ಸ್ ಇಂಡಿಯಾ ಜನವರಿ 2025 ರಲ್ಲಿ ನಡೆಯಲಿರುವ ವಿಶೇಷ ಸಭೆಯಲ್ಲಿ ವಹಿವಾಟಿಗೆ ಷೇರುದಾರರ ಅನುಮೋದನೆಯನ್ನು ಪಡೆಯಲು ಯೋಜಿಸಿದೆ.
ಈ ವ್ಯವಹಾರ ಅಂತ್ಯಗೊಂಡ ಬಳಿಕ, ಬಿಐಎಎಲ್‌ನಲ್ಲಿ ಫೇರ್‌ಫಾಕ್ಸ್ ಇಂಡಿಯಾ ಶೇ.74 ಪಾಲು ಹೊಂದಿದೆ. ಇದರಲ್ಲಿ ಫೇರ್‌ಫಾಕ್ಸ್ ಇಂಡಿಯಾ ಶೇ. 30.4ರಷ್ಟು ಪಾಲು ಹೊಂದಿದ್ದರೆ, ಇದರ ಅಂಗಸಂಸ್ಥೆಯಾಗಿರುವ ಆಂಕಾರೇಜ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ಬರೋಬ್ಬರಿ 43.6 ರಷ್ಟು ಪಾಲು ಹೊಂದಲಿದೆ.
ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಐಐಡಿಸಿ) ತಲಾ ಶೇ. 13ಷ್ಟು ಪಾಲು ಹೊಂದಿದ್ದು, ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
PublicNext
05/12/2024 04:43 pm