ನವದೆಹಲಿ: ಕಳೆದ ಒಂದು ತಿಂಗಳ ಹಿಂದೆ ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತೀ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದ ಅದಾನಿ ಗ್ರೂಪ್ಸ್‌ನ ಗೌತಮ್ ಅದಾನಿ ಈಗ ವಿಶ್ವದ 2ನೇ ಅತೀ ಶ್ರೀಮಂತ ವ್ಯಕ್ತಿ ಎಂಬ ಪಟ್ಟಕ್ಕೆ ಏರಿದ್ದಾರೆ.
ಫೋರ್ಬ್ಸ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ ವಿಶ್ವದ ಶ್ರೀಮಂತ ವ್ಯಕ್ತಿಗಳಾದ ಫ್ರಾನ್ಸ್‌ನ ಜೆಫ್ ಬೆಜೊಸ್ ಹಾಗೂ ಬರ್ನಾರ್ಡ್ ಅರ್ನಾಲ್ಟ್‌ರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಅದಾನಿ ಗ್ರೂಪ್‌ನ ಚೇರ್‌ಮನ್‌ನ ಸಂಪತ್ತು ಶುಕ್ರವಾರ ಸುಮಾರು 5 ಬಿಲಿಯನ್ ಡಾಲರ್ ಏರಿಕೆಯಾಗಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ 40 ಸಾವಿರ ಕೋಟಿ ರೂಪಾಯಿಯಷ್ಟು ಸಂಪತ್ತು ಹೆಚ್ಚಾಗಿದೆ. ಪ್ರಸ್ತುತ ಗೌತಮ್ ಅದಾನಿ ಸಂಪತ್ತು ಸುಮಾರು 155.7 ಬಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ.
ಪ್ರಸ್ತುತ ಗೌತಮ್ ಅದಾನಿ ವಿಶ್ವದಲ್ಲೇ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಟೆಸ್ಲಾ ಮುಖ್ಯಸ್ಥ ಎಲನ್ ಮಸ್ಕ್‌ಗಿಂತ ಕೇವಲ ಒಂದು ಸ್ಥಾನ ಕೆಳಕ್ಕೆ ಇದ್ದಾರೆ. ವಿಶ್ವದ ಅತೀ ಶ್ರೀಮಂತ ವ್ಯಕ್ತಿಯಾದ ಎಲನ್ ಮಸ್ಕ್ ನಿವ್ವಳ ಆದಾಯ ಸುಮಾರು 273.5 ಬಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ.
ಇನ್ನು ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ನ ಸ್ಟಾಕ್‌ಗಳಾದ ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಪವರ್, ಅದಾನಿ ವಿಲ್ಮರ್ ಮೊದಲಾದವು ಭಾರೀ ಏರಿಕೆಯನ್ನು ಕಂಡಿದೆ.
ಬೆಜೊಸ್, ಅರ್ನಾಲ್ಟ್‌ರನ್ನು ಹಿಂದಿಕ್ಕಿದ ಅದಾನಿ ಗ್ರೂಪ್‌ನ ಸ್ಟಾಕ್‌ಗಳು ಭಾರೀ ಏರಿಕೆಯಾಗಿರುವುದು ಗೌತಮ್ ಅದಾನಿಯನ್ನು ಫೋರ್ಬ್ಸ್ ಪಟ್ಟಿಯಲ್ಲಿ ಎಲ್‌ವಿಎಂಎಚ್ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಹಾಗೂ ಅಮೆಜಾನ್ ಸ್ಥಾಪಕ ಜೆಫ್ ಬೆಜೊಸ್‌ಗಿಂತ ಮೆಲಕ್ಕೆ ಎತ್ತಿದೆ. ಈ ಹಿಂದೆ ಎರಡನೇ ಸ್ಥಾನದಲ್ಲಿದ್ದ ಬರ್ನಾರ್ಡ್ ಅರ್ನಾಲ್ಟ್ ಈಗ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್ ನಿವ್ವಳ ಆದಾಯ 155.2 ಬಿಲಿಯನ್ ಡಾಲರ್ ಆಗಿದೆ.
ಇನ್ನು ಜೆಫ್ ಬೆಜೊಸ್ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ. ಜೆಫ್ ಬೆಜೊಸ್ ಪ್ರಸ್ತುತ ಸಂಪತ್ತು 149.7 ಬಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ.
PublicNext
16/09/2022 07:25 pm