ಬೆಂಗಳೂರು: ಕೊರೊನಾದಿಂದ ಕಂಗಾಲಾದ ಜನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನೀರಿಳಿಯದ ಗಂಟಲೋಳ್ ಕಡುಬು ತುರುಕಿದಂತೆ ಆಗುತ್ತಿದೆ. ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಏರುತ್ತಿದ್ದು, ಇಂದು ಸಹ ಏರಿಕೆಯಾಗಿದೆ. ಇಂದು ಪೆಟ್ರೋಲ್ ಬೆಲೆ 70 ಪೈಸೆ ಏರಿಕೆ ಆಗಿದ್ದರೆ ಡೀಸೆಲ್ ಬೆಲೆ 27 ಪೈಸೆ ಏರಿಕೆಯಾಗಿದೆ.
ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 90.53 ಆಗಿದ್ದರೆ ಡೀಸೆಲ್ ಬೆಲೆ 82.40 ರೂ. ಆಗಿದೆ.
ದೆಹಲಿಯಲ್ಲಿ ಪೆಟ್ರೋಲ್ 87.60 ರೂ. ಡೀಸೆಲ್ ಬೆಲೆ 77.73 ರೂ. ಮುಂಬೈನಲ್ಲಿ ಪೆಟ್ರೋಲ್ 94.12 ರೂ. ಡೀಸೆಲ್ ಬೆಲೆ 84.63 ರೂ. ಇದೆ.
ಸೋಮವಾರ ಬ್ರೆಂಟ್ ಕಚ್ಚಾ ತೈಲದ ದರ ಒಂದು ಬ್ಯಾರೆಲ್ ಗೆ 60 ಡಾಲರ್(ಅಂದಾಜು 4,300 ರೂ.) ತಲುಪಿತ್ತು. ಈ ದರ ಈ ವರ್ಷದ ಗರಿಷ್ಠವಾಗಿದ್ದು, ಬೆಲೆ ಹೆಚ್ಚಳ ನೇರವಾಗಿ ಗ್ರಾಹಕರ ಮೇಲೆ ಪರಿಣಾಮ ಬೀರುತ್ತಿದೆ.
ಬೆಲೆ ಏರಿಕೆ ಕಾರಣ?
ದೇಶದ ಕಚ್ಚಾ ತೈಲ ಬೇಡಿಕೆಯ ಶೇ.84ರಷ್ಟನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ದರಗಳಿಗೆ ಅನುಗುಣವಾಗಿ ದೇಶದ ತೈಲ ಮಾರುಕಟ್ಟೆ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತವೆ. ಕೋವಿಡ್–19 ಲಾಕ್ ಡೌನ್ ಘೋಷಣೆಯಾದ ಬಳಿಕ ದೇಶದ ತೈಲ ಮಾರುಕಟ್ಟೆ ಕಂಪನಿಗಳು ಸುಮಾರು 2 ತಿಂಗಳ ಕಾಲ ದರ ಪರಿಷ್ಕರಣೆ ನಿಲ್ಲಿಸಿತ್ತು. ಅಮೆರಿಕದ ಹೊಸ ಅಧ್ಯಕ್ಷ ಜೋ ಬೈಡನ್ ಸರ್ಕಾರ ಇರಾನ್ ಮೇಲಿನ ನಿರ್ಬಂಧ ತೆಗೆದು ಹಾಕಿದರೆ ತೈಲ ಉತ್ಪಾದನೆ ಹೆಚ್ಚಾಗಿ ದರ ಕಡಿಮೆಯಾಗಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
PublicNext
10/02/2021 09:39 am