ನ್ಯೂಯಾರ್ಕ್: ಫೇಸ್‌ಬುಕ್ ಕಂಪನಿ ಹೆಸರನ್ನು ಮೆಟಾವರ್ಸ್ ಎಂದು ಬದಲಾಯಿಸಿದ್ದೇ, ಅದರ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ ಪಾಲಿಗೆ ಕಂಟಕವಾಗಿ ಪರಿಣಮಿಸಿತಾ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಅಮೆರಿಕದ ಪ್ರತಿಯೊಬ್ಬ ಟೆಕ್ ದಿಗ್ಗಜ ಕೂಡ ಈ ವರ್ಷ ಕಠಿಣ ಸಮಯ ಎದುರಿಸುತ್ತಿದ್ದಾರೆ.
ಆದರೆ, ಮೆಟಾವರ್ಸ್ ಸಿಇಒ ಮಾರ್ಕ್ ಜುಕರ್ ಬರ್ಗ್ ಸಂಪತ್ತಿನಲ್ಲಾಗಿರುವ ಇಳಿಕೆ ಮಾತ್ರ ಗಮನಾರ್ಹವಾಗಿದೆ. ಜುಕರ್ ಬರ್ಗ್ ಸಂಪತ್ತಿನಲ್ಲಿ ಅರ್ಧದಷ್ಟು ಇಳಿಕೆಯಾಗಿದ್ದು, ಈ ವರ್ಷದಲ್ಲಿ ಇಲ್ಲಿಯ ತನಕ 71 ಬಿಲಿಯನ್ ಡಾಲರ್ ಇಳಿಕೆಯಾಗಿದೆ. ಬ್ಲ್ಯೂಮ್ ಬರ್ಗ್ ಬಿಲಿಯನರ್ಸ್ ಸೂಚ್ಯಂಕದ ಪ್ರಕಾರ ಉದ್ಯಮಿಗಳಲ್ಲೇ ಇದು ಅತ್ಯಂತ ಹೆಚ್ಚಿನ ಇಳಿಕೆಯಾಗಿದೆ.
ಪ್ರಸ್ತುತ 55.9 ಬಿಲಿಯನ್ ನಿವ್ವಳ ಸಂಪತ್ತು ಹೊಂದಿರುವ ಜುಕರ್ ಬರ್ಗ್ಸ್ ಜಾಗತಿಕ ಬಿಲಿಯನೇರ್ ಗಳಲ್ಲಿ 20ನೇ ಸ್ಥಾನದಲ್ಲಿದ್ದಾರೆ. 2014 ರ ಬಳಿಕ ಇದೇ ಮೊದಲ ಬಾರಿಗೆ ಜುಕರ್ ಬರ್ಗ್ ಪಟ್ಟಿಯಲ್ಲಿ ತುಂಬಾನೇ ಕೆಳಗಿನ ಸ್ಥಾನದಲ್ಲಿದ್ದಾರೆ. ಕೇವಲ ಎರಡು ವರ್ಷದ ಹಿಂದಷ್ಟೇ 38 ವರ್ಷದ ಜುಕರ್ ಬರ್ಗ್ 106 ಬಿಲಿಯನ್ ಡಾಲರ್ ಸಂಪತ್ತು ಹೊಂದಿದ್ದು, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕೇವಲ ಜೆಫ್ ಬೆಜೋಸ್ ಹಾಗೂ ಬಿಲ್ ಗೇಟ್ಸ್ ಅವರಿಗಿಂತ ಹಿಂದಿದ್ದರು.
2021ರ ಸೆಪ್ಟೆಂಬರ್‌ನಲ್ಲಿ ಮಾರ್ಕ್ ಜುಕರ್ ಬರ್ಗ್ಸ್ ಸಂಪತ್ತು 142 ಬಿಲಿಯನ್ ಡಾಲರ್ ಗೆ ಏರಿಕೆಯಾಗಿತ್ತು. ಈ ಸಮಯದಲ್ಲಿ ಕಂಪನಿಯ ಪ್ರತಿ ಷೇರಿನ ಬೆಲೆ 382 ಡಾಲರ್‌ಗೆ ಏರಿಕೆಯಾಗಿತ್ತು. ಇದಾದ ತಿಂಗಳಲ್ಲಿ ಮಾರ್ಕ್ ಜುಕರ್ ಬರ್ಗ್ಸ್ ಮೆಟಾ ಪರಿಚಯಿಸಿ, ಕಂಪನಿಯ ಹೆಸರನ್ನು ಫೇಸ್ ಬುಕ್ ಇಂಕ್ ನಿಂದ ಮೆಟಾವರ್ಸ್ ಎಂದು ಬದಲಾಯಿಸಿದರು. ಇಲ್ಲಿಂದ ಜುಕರ್ ಬರ್ಗ್ ಅವರ ಸಂಪತ್ತಿನಲ್ಲಿ ದೊಡ್ಡ ಮಟ್ಟದ ಇಳಿಕೆ ಪ್ರಾರಂಭವಾಯಿತು. ಅಲ್ಲದೆ, ಟೆಕ್ ಜಗತ್ತಿನಲ್ಲಿ ಸ್ಥಾನ ಕಂಡುಕೊಳ್ಳಲು ಮೆಟಾವರ್ಸ್ ಹೆಣಗಾಡುತ್ತಿದೆ.
ಫೆಬ್ರವರಿಯಲ್ಲಿ ಫೇಸ್‌ಬುಕ್ ಮಾಸಿಕ ಬಳಕೆದಾರರ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ಸಂಸ್ಥೆ ಮಾಹಿತಿ ನೀಡಿತ್ತು. ಕಂಪನಿಯ ಷೇರುಗಳು ಕೂಡ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದವು. ಇದರಿಂದ ಜುಕ್ ಬರ್ಗ್ ಸಂಪತ್ತಿನಲ್ಲಿ 31 ಬಿಲಿಯನ್ ಇಳಿಕೆಯಾಗಿತ್ತು. ಇದು ಅವರ ಸಂಪತ್ತಿನಲ್ಲಿ ಒಂದು ದಿನದಲ್ಲಾದ ಅತಿದೊಡ್ಡ ಇಳಿಕೆಯಾಗಿತ್ತು. ಇನ್ನು ಇನ್‌ಸ್ಟ್ರಾಗ್ರಾಮ್ ರೀಲ್ಸ್, ಟಿಕ್ ಟಾಕ್ ನಂತಹ ಕಿರು ವಿಡಿಯೋ ಪ್ಲ್ಯಾಟ್ ಫಾರ್ಮ್ ಗೆ ಪರ್ಯಾಯವಾಗಿ ಹುಟ್ಟಿಕೊಳ್ಳುವ ಮೂಲಕ ಫೇಸ್ ಬುಕ್‌ಗೆ ಹೊಡೆತ ನೀಡಿತ್ತು.
ಮೆಟಾವರ್ಸ್ ನಲ್ಲಿ ಹೂಡಿಕೆ ಮಾಡಿದ ಪರಿಣಾಮ ಕಂಪನಿಯ ಷೇರುಗಳ ಬೆಲೆ ಇಳಿಕೆಯಾಯಿತು ಎಂದು ಹಿರಿಯ ಇಂಟರ್ನೆಟ್ ವಿಶ್ಲೇಷಕ ಲೌರ ಮಾರ್ಟಿನ್ ಹೇಳಿದ್ದಾರೆ. ಮುಂದಿನ 3-5 ವರ್ಷಗಳ ಅವಧಿಯಲ್ಲಿ ಇನ್ನಷ್ಟು ನಷ್ಟವಾಗುವ ನಿರೀಕ್ಷೆಯಿದೆ ಎಂದು ಸ್ವತಃ ಜುಕರ್ ಬರ್ಗ್ ಅವರೇ ತಿಳಿಸಿದ್ದಾರೆ. ಟಿಕ್‌ಟಾಕ್ ಬಳಕೆದಾರರು ಮೆಟಾ ತನ್ನತ್ತ ಸೆಳೆದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂಬ ಅಭಿಪ್ರಾಯವನ್ನು ಮಾರ್ಟಿನ್ ವ್ಯಕ್ತಪಡಿಸಿದ್ದಾರೆ.
ತೈಲ ಆಮದಿನಿಂದ 35,000 ಕೋಟಿ ರೂ. ಲಾಭ ಜುಕರ್ ಬರ್ಗ್ ಅವರ ಬಹುತೇಕ ಸಂಪತ್ತು ಮೆಟಾ ಷೇರುಗಳಲ್ಲೇ ಇದೆ. ಇದರಲ್ಲಿ ಅವರು 350 ಮಿಲಿಯನ್ ಗಿಂತಲೂ ಹೆಚ್ಚಿನ ಷೇರುಗಳನ್ನು ಹೊಂದಿದ್ದಾರೆ. ನೈಜ ಪ್ರಪಂಚದಿಂದ ತಪ್ಪಿಸಿಕೊಳ್ಳುವ ವರ್ಚುವಲ್ ಪ್ರಪಂಚದ ಜನರನ್ನು ಉದ್ದೇಶಿಸಿ ಕಾದಂಬರಿಕಾರ ನೀಲ್ ಸ್ಟೆಫನ್ಸನ್ ಅವರು ಮೆಟಾವರ್ಸ್ ಎಂಬ ಪದವನ್ನು ಮೊಟ್ಟಮೊದಲ ಬಾರಿಗೆ ಬಳಕೆ ಮಾಡಿದ್ದರು. ಇದೇ ಹೆಸರನ್ನು ಜುಕರ್‌ಬರ್ಗ್ ಅವರು ಫೇಸ್‌ಬುಕ್ ಕಂಪನಿಗೆ ಮರುನಾಮಕರಣ ಮಾಡಿದ್ದಾರೆ.
PublicNext
20/09/2022 05:10 pm