ಬೆಳಗಾವಿ: ಕೊರೊನಾ ನಂತರದ ಈ ಕಾಲಘಟ್ಟದಲ್ಲಿ ಸಣ್ಣ ಉದ್ದಿಮೆದಾರರು ತತ್ತರಿಸಿದ್ದಾರೆ. ಅಂತಹ ಉದ್ಯಮಿಗಳನ್ನು ಮತ್ತೆ ಮುಂಚೂಣಿಗೆ ತರಬೇಕು. ಕಮರಿದ್ದ ವ್ಯವಹಾರ ಮತ್ತೆ ಕುದುರಬೇಕು. ಅದಕ್ಕಾಗಿ ಮಾರುಕಟ್ಟೆ ತಂತ್ರಗಳನ್ನು ದೇಶಪಾಂಡೆ ಫೌಂಡೇಶನ್ ತನ್ನ ಉದ್ಯಮಿಗಳಿಗೆ ಹೇಳಿಕೊಡುತ್ತಿದೆ.
ಅಂದ್ ಹಾಗೆ ಈ ಸಲದ ನವೋದ್ಯಮಿಗಳ ಸ್ಟೋರಿಯಲ್ಲಿ ಬೆಳಗಾವಿಯ ಎಸ್ ಎಸ್ ಮುರುಡಿ ಸಾರೀಸ್ ಬಗ್ಗೆ ತಿಳಿಯೋಣ. ಅಂದು ಕಡುಕಷ್ಟದಲ್ಲಿ ಬೆಳೆದು ಬಂದ ಇವರು ಇಂದು ಹೊರರಾಜ್ಯಕ್ಕೆ ತಾವು ಉತ್ಪಾದಿಸಿದ ಸೀರೆಗಳನ್ನು ಕಳಿಸುತ್ತಿದ್ದಾರೆ. ಉದ್ಯಮಿಯ ಹೆಸರು ಶಿವರಾಜ್ ಸಂಗಮೇಶ್ ಮುರುಡಿ. ಬೆಳಗಾವಿಯ ಖಾಸಭಾಗದದಲ್ಲಿ ಕಳೆದ ಏಳು ವರ್ಷಗಳಿಂದ ಸೀರೆ ಮಾರಾಟ ಉದ್ಯಮ ನಡೆಸುತ್ತಿದ್ದಾರೆ. ವಿಶೇಷ ಅಂದ್ರೆ ಇವರು ಮಾರಾಟ ಮಾಡುವ ಎಲ್ಲ ಬಗೆಯ ಸೀರೆಗಳನ್ನು ಇವರೇ ತಯಾರಿಸುತ್ತಾರೆ. ಸ್ವಂತ ಕೈಮಗ್ಗ ಹೊಂದಿರುವ ಶಿವರಾಜ್ ಮುರುಡಿ ಸ್ವತಃ ಸೀರೆಗಳನ್ನು ನೇಯುತ್ತಾರೆ.
ಇದರಲ್ಲೇನು ಲಾಭ? ಇದೆಲ್ಲ ಬ್ಯುಸಿನೆಸ್ ಒಳ್ಳೆ ಲಾಭ ಕೊಡುತ್ತಾ? ಬೇಡ ಸುಮ್ನೆ ಬಿಟ್ಟು ಬೇರೆ ಕೆಲಸ ನೋಡು. ಅಕಸ್ಮಾತ್ ಲಾಸ್ ಆದ್ರೆ ಏನು ಮಾಡ್ತಿಯಾ?...ಹೀಗೆ ಅನೇಕ ಹಿಂಜರಿಕೆಯ, ಅನೇಕ ನಿಂದನೆಯ ಮಾತುಗಳನ್ನು ಲೆಕ್ಕಿಸದೇ ತಮ್ಮ ಕೆಲಸ ತಾವು ಮಾಡಿಕೊಂಡು ಬಂದ ಶಿವರಾಜ್ ಅವರಿಗೆ ಈಗ ಯಶಸ್ಸು ಹುಡುಕಾಡಿಕೊಂಡು ಬಂದಿದೆ. ಅನೇಕ ಸೀರೆ ಅಂಗಡಿಗಳ ಮಾಲೀಕರು ಇವರ ಬಳಿ ಸೀರೆ ಖರೀದಿಸಲು ಮುಗಿ ಬೀಳ್ತಾರೆ. ಕಾರಣ ಬಟ್ಟೆಯ ಗುಣಮಟ್ಟ ಹಾಗೂ ಹೋಲ್ ಸೇಲ್ ದರದ ವ್ಯಾಪಾರ.
ಶಿವರಾಜ್ ಅವರ ಈ ಯಶೋಗಾಥೆಯಲ್ಲಿ ಅವರ ಶ್ರೀಮತಿ ಹಾಗೂ ಕುಟುಂಬಸ್ಥರ ಪಾತ್ರ ದೊಡ್ಡದಿದೆ. ಊರ ಮಂದಿಗೆಲ್ಲ ಬಟ್ಟೆ ನೇಯ್ದು ಕೊಡುವ ನೇಕಾರರೇ ಹರಿದ ಬಟ್ಟೆ ಹಾಕಿರುತ್ತಾರೆ ಎನ್ನುವ ಒಂದು ಮಾತಿದೆ. ಅಂದ್ರೆ ನೇಕಾರರ ಆರ್ಥಿಕ ಸ್ಥಿತಿಗತಿ ಆ ಮಟ್ಟಿಗೆ ಇರುತ್ತೆ ಎಂಬುದು ಆ ಮಾತಿನ ಅರ್ಥ. ಆದ್ರೆ ನಿರಂತರ ದುಡಿಮೆಯೇ ದುಡ್ಡಿನ ದಾರಿ ಎಂಬಂತೆ ದೇಶಪಾಂಡೆ ಫೌಂಡೇಶನ್ ನೆರವು ಹಾಗೂ ಸಹಕಾರ ಪಡೆದುಕೊಂಡ ಶಿವರಾಜ್ ಮುರುಡಿ ಅವರು ಈಗ ಲಕ್ಷಾಂತರ ಆದಾಯ ಗಳಿಸುತ್ತಿದ್ದಾರೆ. ದೇಶಪಾಂಡೆ ಫೌಂಡೇಶನ್ ಸಹಯೋಗದ ಉದ್ಯಮಿ ಸಂತೆಯಲ್ಲಿ ಭಾಗವಹಿಸಿ ಮಾರ್ಕೆಟಿಂಗ್ ಪ್ರಪಂಚಕ್ಕೆ ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದಾರೆ.
ಏನಿಲ್ಲದಿದ್ದರೂ ದುಡಿಮೆಯ ಹಸಿವು ಇರಬೇಕು. ಸಾವಿರ ಸಲ ಸೋತರೂ ಮತ್ತೆ ಎದ್ದು ನಿಂತು ನಾನು ದುಡಿತೀನಿ ಎನ್ನುವ ಛಲ ಇರಬೇಕು. ಆ ರೀತಿ ಸಂಕಲ್ಪ ತೊಟ್ಟ ಶಿವರಾಜ್ ಸಾವಿರ ಲೆಕ್ಕದ ಉದ್ಯಮದಿಂದ ಲಕ್ಷ ಆದಾಯ ಗಳಿಸುವವರೆಗೆ ಬಂದು ನಿಂತಿದ್ದಾರೆ.
ದೇಶಪಾಂಡೆ ಫೌಂಡೇಶನ್ ಸಣ್ಣ ಉದ್ದಿಮೆಗಳ ಮಾಹಿತಿಗಾಗಿ ಸಂಪರ್ಕಿಸಿ +91 77609 65490
PublicNext
23/06/2022 09:31 pm