ನವದೆಹಲಿ: ಚೆಕ್ ಬೌನ್ಸ್ ಆದಾಗ, ಚೆಕ್ ನೀಡಿದ ವ್ಯಕ್ತಿಯ ಬೇರೆ ಖಾತೆಗಳಿಂದ ಹಣ ಕಡಿತ ಮಾಡುವ ಹಾಗೂ ಮುಂದೆ ಆ ವ್ಯಕ್ತಿ ಹೊಸ ಖಾತೆ ತೆರೆಯುವುದನ್ನು ನಿರ್ಬಂಧಿಸುವ ಸಾಧ್ಯತೆಗಳ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಪರಿಶೀಲನೆ ನಡೆಸಿದೆ.
ಹೌದು. ದೇಶದ ವಿವಿಧ ಕೋರ್ಟ್‌ಗಳಲ್ಲಿ ಸದ್ಯ 35 ಲಕ್ಷಕ್ಕೂ ಹೆಚ್ಚು ಚೆಕ್ ಬೌನ್ಸ್ ಪ್ರಕರಣಗಳಿವೆ. ಸಾಮಾನ್ಯ ನ್ಯಾಯಾಲಯಗಳಲ್ಲಿ ಇವುಗಳ ವಿಚಾರಣೆ ಸಾಧ್ಯವಾಗದೇ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್, ಈ ಬಗ್ಗೆ ಏನು ಕ್ರಮ ಕೈಗೊಳ್ಳಬಹುದು ಎಂದು ಶಿಫಾರಸು ಮಾಡಲು ಸಮಿತಿಯೊಂದನ್ನು ರಚಿಸಿತ್ತು. ಈ ಪ್ರಕರಣದ ವಿಚಾರಣೆ ವೇಳೆ ಚೆಕ್ ಬೌನ್ಸ್ ಪ್ರಕರಣಗಳ ವಿಚಾರಣೆಗೆಂದೇ ಪ್ರತ್ಯೇಕ ಕೋರ್ಚ್ ಸ್ಥಾಪನೆ ಬಗ್ಗೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿತ್ತು. ಅದರ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವಾಲಯ ಇಂಥ ಪ್ರಕರಣಗಳ ನಿರ್ವಹಣೆ ಕುರಿತು ಸಲಹೆ ಪಡೆಯಲು ಉನ್ನತ ಮಟ್ಟದ ಸಭೆಯೊಂದನ್ನು ಆಯೋಜಿಸಿತ್ತು. ಅದರಲ್ಲಿ ಹಲವು ಮಹತ್ವದ ಸಲಹೆಗಳು ವ್ಯಕ್ತವಾಗಿವೆ.
ದೇಶಾದ್ಯಂತ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಚೆಕ್ ಬೌನ್ಸ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಚೆಕ್ ನೀಡಿರುವ ವ್ಯಕ್ತಿಯ ಒಂದು ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೇ ಹೋದರೆ ಆತನ ಇನ್ನೊಂದು ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸುವುದು. ಚೆಕ್ ಬೌನ್ಸ್ ಅನ್ನು ಸಾಲ ಮರುಪಾವತಿಗೆ ವಿಫಲ ಎಂದು ಪರಿಗಣಿಸುವುದು. ಈ ಮಾಹಿತಿಯನ್ನು ರೇಟಿಂಗ್ ಏಜೆನ್ಸಿಗೆ ರವಾನಿಸಿ ಅವರ ಕ್ರೆಡಿಟ್ ರೇಟಿಂಗ್ ಕಡಿಮೆಗೊಳಿಸಲು ಕ್ರಮ ಸೇರಿದಂತೆ ಹಲವು ಪ್ರಸ್ತಾವಗಳ ಜಾರಿಗೆ ಪರಿಶೀಲನೆ ನಡೆಸುತ್ತಿದೆ.
PublicNext
10/10/2022 07:59 am