ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಖಾಸಗಿ ವಲಯದ ಎರಡನೇ ಅತಿ ದೊಡ್ಡ ಬ್ಯಾಂಕ್ HDFCಗೆ ಬಿಗ್ ಶಾಕ್ ನೀಡಿದೆ.
HDFC ಮೇಲೆ ಕೆಲ ನಿಬಂಧನೆಗಳನ್ನು ವಿಧಿಸಿರುವ RBI, ಬ್ಯಾಂಕ್ ನ ಎಲ್ಲ ಡಿಜಿಟಲ್ ವ್ಯವಹಾರಗಳನ್ನು ನಿರ್ಬಂಧಿಸಿದೆ.
ಹೌದು ಡಿಜಿಟಲ್ ಚಟುವಟಿಕೆಗಳನ್ನು ಹಾಗೂ ಹೊಸ ಕ್ರೆಡಿಟ್ ಕಾರ್ಡ್ ಕೊಡುವುದನ್ನು ಕೂಡಲೇ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಆರ್ ಬಿ ಐ ಆದೇಶ ನೀಡಿದೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸಂಬಂಧಿಸಿ ಎಚ್ ಡಿಎಫ್ ಸಿ ಗ್ರಾಹಕರಿಗೆ ಆಗಿರುವ ತೊಂದರೆ ಮತ್ತು ಇತ್ತೀಚೆಗೆ ನವೆಂಬರ್ 21ರಂದು ಬ್ಯಾಂಕಿನ ಪ್ರೈಮರಿ ಡೇಟಾ ಸೆಂಟರ್ ನಲ್ಲಿ ಪವರ್ ಫೇಲ್ಯೂರ್ ಉಂಟಾದ ಪರಿಣಾಮ ಗ್ರಾಹಕರು ಸಂಕಷ್ಟಕ್ಕೆ ಈಡಾಗಿದ್ದರು.
ಈ ಎಲ್ಲವನ್ನು ಗಮನಿಸಿದ ಆರ್ ಬಿಐ ನಿನ್ನೆ ಈ ಆದೇಶವನ್ನು ನೀಡಿದೆ.
ಡಿಜಿಟಲ್ 2.0 ಯೋಜನೆ ಪ್ರಕಾರ ಗ್ರಾಹಕರಿಗೆ ಪರಿಚಯಿಸಲು ಹೊರಟಿದ್ದ ಎಲ್ಲ ಡಿಜಿಟಲ್ ಸೇವೆ ಮತ್ತು ಪ್ರಸ್ತಾವಿತ ಐಟಿ ಅಪ್ಲಿಕೇಶನ್ ಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು.
ಅಲ್ಲದೆ, ಹೊಸದಾಗಿ ಕ್ರೆಡಿಟ್ ಕಾರ್ಡ್ ವಿತರಿಸುವುದನ್ನು ಕೂಡ ನಿಲ್ಲಿಸಬೇಕು.
ಕೂಡಲೇ ಲೋಪ ದೋಷಗಳನ್ನು ಪತ್ತೆಹಚ್ಚಿ ಸರಿಪಡಿಸುವ ಕೆಲಸವನ್ನು ಆದ್ಯತೆ ಮೇರೆಗೆ ಎಚ್ ಡಿಎಫ್ ಸಿ ಆಡಳಿತ ಮಂಡಳಿ ಮಾಡಬೇಕು ಎಂದು ಆರ್ ಬಿಐ ನಿರ್ದೇಶಿಸಿದೆ.
ಈಗಾಗಲೇ ಚಾಲ್ತಿಯಲ್ಲಿರುವ ಕ್ರೆಡಿಟ್ ಕಾರ್ಡ್ ಗಳ ಮೇಲೆ, ಡಿಜಿಟಲ್ ಬ್ಯಾಂಕ್ ಚಟುವಟಿಕೆಗಳ ಮೇಲೆ ಪ್ರಸ್ತುತ ತೆಗೆದುಕೊಳ್ಳುತ್ತಿರುವ ಕ್ರಮಗಳು ಪರಿಣಾಮ ಬೀರುವುದಿಲ್ಲ ಎಂಬುದನ್ನು ಗ್ರಾಹಕರಿಗೆ ಖಾತರಿ ಒದಗಿಸುವ ಕೆಲಸ ಮಾಡಿ ಎಂದು ಆರ್ ಬಿ ಐ ತಿಳಿಸಿದೆ.
PublicNext
03/12/2020 06:30 pm