ಬೀದರ್: ಹೆರಿಗೆ ವೇಳೆ ಬ್ರಿಮ್ಸ್ ವೈದ್ಯರು ಮಾಡಿದ ಮಹಾ ಎಡವಟ್ಟಿನಿಂದ ನವಜಾತ ಶಿಶುವಿನ ಬಲಗಾಲ ಮೂಳೆಯೇ ಮುರಿದಿದೆ. ಹೆರಿಗೆ ಬಳಿಕ ಸ್ಕ್ಯಾನಿಂಗ್ ಮಾಡಿಸಿದಾಗ ಬಲಗಾಲಿನ ತೊಡೆಯ ಮೂಳೆ ಮುರಿದಿರುವುದು ಬೆಳಕಿಗೆ ಬಂದಿದೆ. ಮೂಳೆ ಮುರಿತದಿಂದಾಗಿ ಒಂದು ತಿಂಗಳ ಹಸುಗೂಸು ನೋವು ತಾಳಲಾರದೇ ನರಳಾಡುತ್ತಿದೆ.
ಹಸುಗೂಸಿನ ಚಿಕಿತ್ಸೆಗಾಗಿ ಬಡ ಕುಟುಂಬ ಪರದಾಡುತ್ತಿದ್ದು, ಶಾಶ್ವತ ಅಂಗವೈಕಲ್ಯದ ಭೀತಿ ಶುರುವಾಗಿದೆ.
ಈ ಘಟನೆ ಡಿಸೆಂಬರ್ 14 ರಂದು ನಡೆದಿತ್ತು. ಬೀದರ್‌ನ ಮಂಗಲ್‌ಪೇಟೆ ನಿವಾಸಿ ರೂಪಾರಾಣಿ ಮಡಿವಾಳ ಅವರನ್ನು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ದಾಖಲಾದ ಒಂದೂವರೆ ಗಂಟೆಯೊಳಗೆ ಅವರು ಗಂಡು ಮಗುವಿಗೆ ಜನ್ಮ ನೀಡಿದರು.
ತಾಯಿಯ ಗರ್ಭದಲ್ಲಿ ಮಗುವಿನ ಸ್ಥಾನ ತಲೆಕೆಳಗಾಗಿರುವುದನ್ನು ಮಹಿಳೆಯ ಕುಟುಂಬ ವೈದ್ಯರ ಗಮನಕ್ಕೆ ತಂದಿತ್ತು, ಮತ್ತು ಸಾಮಾನ್ಯ ಹೆರಿಗೆಗೆ ಹೋಗುವ ಬದಲು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡುವಂತೆ ವೈದ್ಯರನ್ನು ಕೋರಿತ್ತು.
ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ನರ್ಸ್ 3,000 ರೂ. ಬೇಡಿಕೆ ಇಟ್ಟಿದ್ರು, ಇಲ್ಲದಿದ್ದರೆ ಸಾಮಾನ್ಯ ಹೆರಿಗೆ ಮಾಡುವುದಾಗಿ ಒತ್ತಾಯಿಸಿದರು ಎಂದು ರೂಪಾಣಿ ಅವರ ಪತಿ ನಾಗೇಂದ್ರ ಆರೋಪಿಸಿದ್ದಾರೆ.
ಇನ್ನು ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶುವಿನ ಮೂಳೆ ಮುರಿತಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಕಮಲಾಕರ್ ಹೆಗಡೆ ಅವರೊಂದಿಗೆ ಬ್ರಿಮ್ಸ್ ನಿರ್ದೇಶಕ ಶಿವಕುಮಾರ್ ಶೆಟಗಾರ್‌ಗೆ ತಪ್ಪಿತಸ್ಥ ವೈದ್ಯ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ ತಿಂಗಳು ಕಳೆದ್ರೂ, ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಸ್ತ್ರೀರೋಗ ತಜ್ಞೆ ಡಾ. ಉಮಾ ಧಸ್ಮುಖ್ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ, "ಹೆರಿಗೆಯ ಸಮಯದಲ್ಲಿ ಇದೆಲ್ಲವೂ ಸಾಮಾನ್ಯ. ಯಾವುದೇ ನಿರ್ಲಕ್ಷ್ಯವಿಲ್ಲ. ನೂರು ಕೇಸ್‌ನಲ್ಲಿ ಒಂದೆರಡು ಕೇಸ್ ಈ ರೀತಿ ಆಗೋದು ಕಾಮನ್. ಹೀಗಾಗಿ ಇದರಲ್ಲಿ ಆಸ್ಪತ್ರೆ ಆಗಲಿ, ವೈದ್ಯರದ್ದಾಗಲಿ ನಿರ್ಲಕ್ಷ್ಯವಿಲ್ಲ , ಮೂಳೆ ಮುರಿದಿದೆ, ಆದರೆ ಅದು ಮೂರು ತಿಂಗಳಲ್ಲಿ ಗುಣವಾಗುತ್ತದೆ" ಎಂದು ಉಡಾಫೆ ಉತ್ತರ ನೀಡಿದ್ದಾರೆ.
ವರದಿ:ಯೋಹಾನ್ ಪಿ ಹೊನ್ನಡ್ಡಿ ಬೀದರ್
PublicNext
23/01/2025 12:02 pm