ಕಿತ್ತೂರು : ಈ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ಈ ಬಾರಿ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಆಚರಿಸಲಾಗುತ್ತಿದ್ದು, ಸರಕಾರ ಎರಡು ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿರುತ್ತದೆ.
ಉತ್ಸವದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸಲಿರುವ ವೀರಜ್ಯೋತಿಯಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ.2 ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಮಹಾಂತೇಶ್ ದೊಡ್ಡಗೌಡ್ರ ತಿಳಿಸಿದರು.
ಚೆನ್ನಮ್ಮನ ಕಿತ್ತೂರಿನ ವೀರಭದ್ರೇಶ್ವರ ಕಲ್ಯಾಣಮಂಟಪದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚೆನ್ನಮ್ಮ ಉತ್ಸವ ರಾಜ್ಯಮಟ್ಟದ ಉತ್ಸವವಾಗಿ ಆಚರಣೆ; ರಾಜ್ಯದಾದ್ಯಂತ ವೀರಜ್ಯೋತಿಯಾತ್ರೆ ಸಂಚಾರ ಸೇರಿದಂತೆ ಎಲ್ಲ ಬೇಡಿಕೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಡೇರಿಸಿದ್ದಾರೆ.
ಅ.2 ರಂದು ಮುಖ್ಯಮಂತ್ರಿಗಳು ಸ್ವತಃ ವೀರಜ್ಯೋತಿಯಾತ್ರೆಗೆ ಚಾಲನೆ ನೀಡಲಿದ್ದಾರೆ. ವೀರಜ್ಯೋತಿಯಾತ್ರೆಯನ್ನು ಎಲ್ಲ ಜಿಲ್ಲೆಗಳಲ್ಲಿ ಅತ್ಯಂತ ಗೌರವಯುತವಾಗಿ ಸ್ವಾಗತಿಸಿ ಬೀಳ್ಕೊಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸರಕಾರ ಆದೇಶ ನೀಡಲಿದೆ ಎಂದು ಶಾಸಕ ಮಹಾಂತೇಶ್ ದೊಡ್ಡಗೌಡ್ರ ಹೇಳಿದರು.
ಪ್ರತಿಯೊಬ್ಬರು ಸ್ವಯಂಪ್ರೇರಣೆಯಿಂದ ಉತ್ಸವದಲ್ಲಿ ಭಾಗವಹಿಸುವ ಮೂಲಕ ಕಿತ್ತೂರು ಉತ್ಸವವನ್ನು ಸಂಭ್ರಮದಿಂದ ಆಚರಿಸೋಣ ಎಂದು ಮನವಿ ಮಾಡಿಕೊಂಡರು.
PublicNext
30/09/2022 08:54 pm