ಬೆಳಗಾವಿ: ಅನಗತ್ಯ ರಾಜಕೀಯ ಮಾಡುವ ವಿಘ್ನ ಸಂತೋಷಿಗಳ ಕುರಿತು ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಅಭಿವೃದ್ಧಿ ವಿಚಾರದಲ್ಲಿ ನಾನು ಎಂದೂ ರಾಜಕೀಯ ಮಾಡುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸುಳಗಾ ಗ್ರಾಮದಲ್ಲಿ ಶನಿವಾರ, ರಾಯಚೂರು - ಬಾಚಿ ರಾಜ್ಯ ಹೆದ್ದಾರಿಯ 20 ಕಿಮೀ ಅಭಿವೃದ್ಧಿಪಡಿಸುವ 9 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಲೋಕೋಪಯೋಗಿ ಸಚಿವರೂ ಆಗಿರುವ ಸತೀಶ್ ಜಾರಕಿಹೊಳಿ ಜೊತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಹೆಬ್ಬಾಳ್ಕರ್, ಕೇವಲ ಭಾಷೆ, ಧರ್ಮದ ವಿಚಾರದಲ್ಲಿ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ರಾಜಕೀಯ ಮಾಡುತ್ತಾರೆ. ಅಂತವರಿಗೆ ಅಭಿವೃದ್ಧಿಯ ಅರ್ಥವೇ ಗೊತ್ತಿಲ್ಲ. ಅವರು ವಿಘ್ನ ಸಂತೋಷಿಗಳು.
ಈ ಬಾರಿ ನಿರಂತರ ಮಳೆಯಿಂದಾಗಿ ಹಲವು ಕಾಮಗಾರಿಗಳು ವಿಳಂಬವಾಗಿವೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ನಾನು ಯಾವತ್ತೂ ರಾಜಕೀಯ ಮಾಡುವುದಿಲ್ಲ, ಯಾರು, ಯಾವ ಪಕ್ಷ, ಯಾವ ಜಾತಿ ಎನ್ನುವ ಕುರಿತು ಯೋಚಿಸುವುದೂ ಇಲ್ಲ ಎಂದರು.
ಮಕ್ಕಳನ್ನು ಶಾಲೆಗೆ ದಾಖಲು ಮಾಡಿಸಲು, ಹಾಸ್ಟೆಲ್ ಗೆ ಸೇರಿಸಲು, ವರ್ಗಾವಣೆ ಮಾಡಿಸಿಕೊಳ್ಳಲು ಹೀಗೆ ಹಲವು ವಿಚಾರಗಳಿಗೆ ಜನರು ನನ್ನ ಬಳಿ ಬರುತ್ತಾರೆ. ನಿತ್ಯ ನೂರಾರು ಜನರು ಬಂದು ಕೆಲಸ ಮಾಡಿಸಿಕೊಳ್ಳುತ್ತಾರೆ. ಯಾವುದೇ ವಿಷಯಕ್ಕೆ ನನ್ನ ಬಳಿ ಬಂದರೂ ಪರಿಹಾರ ನೀಡುತ್ತಾ ಬಂದಿದ್ದೇನೆ. ಇಡೀ ರಾಜ್ಯಕ್ಕೆ ನಾನು ಮಂತ್ರಿ ಇರಬಹುದು, ಆದರೆ ಗ್ರಾಮೀಣ ಕ್ಷೇತ್ರಕ್ಕೆ ಎಂದಿಗೂ ಮನೆ ಮಗಳು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
PublicNext
15/12/2024 10:15 am